ಉಡುಪಿ, ಸೆ.6 (MSP): ಜಿಲ್ಲೆಯಲ್ಲಿ ಆಗಸ್ಟ್ 3, 4 ರಂದು, ಮಳೆಯಲ್ಲಿ ಉದುರಿದ ಬಿಳಿಯ ವಸ್ತು ಬೂದಿ ಎಂಬುವುದನ್ನು ಸುರತ್ಕಲ್ ನ ಎನ್ ಐ ಟಿಕೆ ರಾಸಾಯನಿಕ ಎಂಜಿಯರಿಂಗ್ ವಿಭಾಗ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ರಾಜಾರಾಮ್ ತಲ್ಲೂರು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹಿಸಿದ ಮಾದರಿಯಲ್ಲಿ ಅದರ ಅದರ ತೂಕದ 71.43 ಶೇಕಡಾ ಬೂದಿ, 12.51 ಶೇಕಡಾ ಫಿಕ್ಸೆಡ್ ಕಾರ್ಬನ್, 10.92 ಶೇಕಡಾ ವಲಟೈಲ್ರಾಸಾಯನಿಕಗಳು ಮತ್ತು 5.09 ಶೇಕಡಾ ತೇವಾಂಶ ಇತ್ತು ಎಂದು ವರದಿ ಸ್ಪಷ್ಟಪಡಿಸಿದೆ.ಮೈ ಮೇಲೆ ಬೂದಿ ಉದುರಿರುವಾಗಲೂ ಉಡುಪಿಯ ಜನ ಮಾತನಾಡದಿದ್ದರೆ , ನಾಗರಿಕ ಜವಬ್ದಾರಿಗಳಿಗೆ ಮಾಡಿದಂತೆ ಎಂದರು. ಇದಕ್ಕೆ ಕಾರಣ ಪತ್ತೆ ಹಚ್ಚುವುದರೊಂದಿಗೆ ಅಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿ, ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಗೆ ಹೋಗಬೇಕಾದಿತು ಎಂದು ಎಚ್ಚರಿಸಿದರು.
ಮನೋವೈದ್ಯ ಡಾ ಪಿವಿ ಭಂಡಾರಿ ಮಾತನಾಡಿ, ಎನ್ ಐಟಿಕೆ ವರದಿ ಪ್ರಕಾರ ಮಾಲಿನ್ಯ ನಿಯಂತ್ರಣ ಮಂಡಳಿ ಯಾವ ಕ್ರಮ ಕೈಗೊಂಡಿದೆ ಉಷ್ಣ ವಿದ್ಯುತ್ ಸ್ಥಾವರ ಹತ್ತಿರದಲ್ಲೇ ಇರುವಾಗ ಯಾವ ರೀತಿಯ ಮುಂಜಾಗ್ರತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.
ಕೊಡಗು ಹಾಗೂ ಕೇರಳದಲ್ಲಿ ಮಾನವ ನಿರ್ಮಿತ ಅಪಘಾತಗಳನ್ನು ಕಣ್ಣಾರೆ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಪರಿಸರ ನಾಶ ಚಟುವಟಿಕೆಗಳ ಕುರಿತು ಎಚ್ಚೆತ್ತುಕೊಳ್ಳಬೇಕು. ಉಡುಪಿಯಲ್ಲಿ ಬೂದಿ ಪ್ರಕರಣದ ಕುರಿತು ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು. ಈ ಪ್ರಕರಣ ಸುತ್ತಮುತ್ತಲಿನ ಕೈಗಾರಿಕೆಗಳು ನಮ್ಮ ಪರಿಸರವನ್ನು ಹಾನಿ ಮಾಡುವ ಸಾಧ್ಯತೆಗಳ ಬಗ್ಗೆ ಎಲ್ಲ ಚಿಹ್ನೆಗಳನ್ನು ತೋರಿಸುತ್ತಿದೆ ಎಂದರು.ಒಬ್ಬ ವೈದ್ಯರಾಗಿ ಇಲ್ಲಿನ ಮನುಷ್ಯರ ಆರೋಗ್ಯ, ಸಸ್ಯ-ಪ್ರಾಣಿಗಳ ಮೇಲೆ ಆಗುವ ಪರಿಣಾಮಗಳನ್ನು ಹಗುರವಾಗಿ ಪರಿಗಣಿಸಲು ಆಗುವುದಿಲ್ಲ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದವರು ಹೇಳಿದರು.
ಎಂಡೋಸಲ್ಫಾನ್ ಸಮಸ್ಯೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಾವು ಕಂಡಿದ್ದೇವೆ. ಸರ್ಕಾರ ಅವರಿಗೆ ಪ್ಯಾಕೇಜ್ ಕೊಟ್ಟು ಕೈತೊಳೆದುಕೊಂಡಿದೆ. ಇಂತಹ ಪ್ಯಾಕೇಜ್ ನಿರ್ವಹಿಸಲು ಸರ್ಕಾರದ ಬಳಿ ದುಡ್ಡು ಇರುವುದಿಲ್ಲ. ಹಾರು ಬೂದಿಯ ವಿಷಯದಲ್ಲೂ ಇಂತಹದೇ ಸನ್ನಿವೇಶ ಪುನರಾವರ್ತನೆ ಆಗದಿರಲಿ. ಜನಸಾಮಾನ್ಯರಿಗೆ ಬದುಕುವ ಹಕ್ಕು ಬೇಕೇ ಹೊರತು ಬದುಕಲಾಗದ ಅಭಿವೃದ್ಧಿ ಬೇಡ ಎಂದು ಅವರು ಸ್ಪಷ್ಟಪಡಿಸಿದರು