ಉಳ್ಳಾಲ, ಸೆ 6 (MSP): ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಬಿಜೆಪಿಯ ಅಭ್ಯರ್ಥಿ ಸೋಲಿಗೆ ಕಾರಣರಾದರೆಂದು ಆರೋಪಿಸಿ ಬಿಜೆಪಿ ಪಕ್ಷದ ಮೂವರು ಕಾರ್ಯಕರ್ತರು ಬಾರಿನೊಳಕ್ಕೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರಿಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತೊಕ್ಕೊಟ್ಟು ಮೂನ್ಲೈಟ್ ಬಾರಿನಲ್ಲಿ ಸೆ.5ರ ಬುಧವಾರ ತಡರಾತ್ರಿ ನಡೆದಿದೆ.
ಕೃಷ್ಣನಗರ ನಿವಾಸಿಗಳಾದ ಜಾರ್ಜ್ ಲೋಬೊ (51) ಮತ್ತು ಮೋಹನದಾಸ್ (42) ದಾಳಿಗೆ ಒಳಗಾದವರು. ನಿನ್ನೆ ರಾತ್ರಿ ವೇಳೆ ಬಾರಿನ ಒಳಗಡೆ ಕುಳಿತಿದ್ದ ಸಂದರ್ಭ ಸ್ಥಳೀಯ ನಿವಾಸಿಗಳಾಗಿರುವ, ಈ ಹಿಂದೆಯೂ ಕ್ರಿಮಿನಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಕಾರ್ಯಕರ್ತರೆನ್ನಲಾದ ಕವಿತ್ ಪೂಜಾರಿ , ಅರುಣ್ ಭಂಡಾರಿ ಯಾನೆ ಮಡ್ಡಿ, ಸುನಿ ಬೆಳ್ಚಾಡ ಯಾನೆ ಚಟ್ನಿ ಎಂಬವರು ಸೇರಿಕೊಂಡು ಬಾರಿನೊಳಕ್ಕೆ ನುಗ್ಗಿ ಬಿಯರ್ ಬಾಟಲಿಯಿಂದ ಇಬ್ಬರ ಮೇಲೂ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಕೃಷ್ಣನಗರ ವಾರ್ಡಿನಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಚಿತ್ರಾ ಚಂದ್ರಕಾಂತ್ ಅವರು ವಿಜಯಿಯಾಗಿದ್ದರು. ಈ ಹಿಂದೆಯೂ ಉಳ್ಳಾಲ ಪುರಸಭೆಯ ಉಪಾಧ್ಯಕ್ಷೆಯಾಗಿದ್ದ ಚಿತ್ರ, ಎರಡನೇ ಬಾರಿಯೂ ವಿಜಯಿಯಾಗಿದ್ದಾರೆ. ಅಲ್ಲದೆ ಈ ಬಾರಿ ಆಡಳಿತದಲ್ಲಿ ಅಧ್ಯಕ್ಷೆ ಪಟ್ಟಕ್ಕೂ ಅವರ ಹೆಸರು ಕೇಳಿಬಂದಿತ್ತು. ಇದನ್ನು ಸಹಿಸಲಾಗದ ಬಿಜೆಪಿ ಕಾರ್ಯಕರ್ತರು ಚುನಾವಣೆ ವೇಳೆ ಚಿತ್ರಾ ಪರ ಮತಯಾಚನೆಯಲ್ಲಿ ಭಾಗವಹಿಸಿದ್ದ ಇಬ್ಬರಿಗೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕವೂ ನಿರಂತರವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆಯನ್ನು ಒಡ್ಡುತ್ತಲೇ ಬಂದಿದ್ದರೆಂದು ಗಾಯಾಳುಗಳು ಆರೋಪಿಸಿದ್ದಾರೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.