ಬಂಟ್ವಾಳ,ಸೆ 5(MSP) : ಬಡ ಹಿಂದೂ ಮಹಿಳೆಯೋರ್ವರ ಶವಸಂಸ್ಕಾರಕ್ಕೆ ಸ್ಥಳೀಯರು ನೆರವಾಗದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರು ಮನೆಮಂದಿಗೆ ಸಾಥ್ ನೀಡಿ ಹಿಂದೂ ಸಂಪ್ರದಾಯದಂತೆ ಎಲ್ಲ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಅಡ್ಡೂರು ಗ್ರಾಮದ ಕುಚ್ಚಿಗುಡ್ಡೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.ಮೂಲತಃ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ನಿವಾಸಿ ಸುಶೀಲಮ್ಮ (65) ನಿಧನ ಹೊಂದಿದ ಹಿಂದೂ ಮಹಿಳೆ ಎಂದು ಗುರುತಿಸಲಾಗಿದ್ದು, ಅವರಿಗೆ ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದರೂ ಕೂಡ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು.
ಘಟನೆ ವಿವರ:
ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ಕುಚ್ಚಿಗುಡ್ಡೆಯ ಮನೆಯೊಂದರಲ್ಲಿ ವಾಸವಾಗಿದ್ದ ಸುಶೀಲಮ್ಮ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಪುತ್ರರು ಶನಿವಾರ ತನ್ನ ನಿವಾಸಕ್ಕೆ ಕೊಂಡೊಯ್ದಿದ್ದಾರೆ. ಬಳಿಕ ಅಂದು ಸಂಜೆ ಸುಮಾರು 4ರ ಸುಮಾರಿಗೆ ಸುಶೀಲಮ್ಮರ ಆರೋಗ್ಯದಲ್ಲಿ ಪುನಃ ಏರುಪೇರಾಗಿ ಹಠಾತ್ ಮೃತಪಟ್ಟಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ಸ್ಥಳೀಯ ಹಿಂದೂ ನಿವಾಸಿಗಳಿಗೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿ, ಅಂತ್ಯಸಂಸ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಆದರೆ ಈ ಹಿಂದೆ ಸುಶೀಲಮ್ಮ ಅವರು ತನ್ನ ಪುತ್ರಿಯೋರ್ವಳನ್ನು ಅಂತರ್ಜಾತಿಯ ಯುವಕನಿಗೆ ವಿವಾಹ ಮಾಡಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಸ್ಥಳೀಯ ಹಿಂದೂಗಳು ಹಾಗೂ ಸಂಬಂಧಿಕರು ಅವರ ಶವಸಂಸ್ಕಾರಕ್ಕೆ ಸಹಕರಿಸಲಿಲ್ಲ ಎಂದು ಹೇಳಲಾಗಿದೆ ಈ ಕಾರಣದಿಂದ ರಾತ್ರಿ 9ರವರೆಗೂ ಮೃತದೇಹವನ್ನು ಮನೆಯಲ್ಲಿಯೇ ಇರಿಸಲಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಮುಸ್ಲಿಂ ಯುವಕರಾದ, ಎ.ಕೆ.ಮುಸ್ತಫಾ, ಅಶ್ರಫ್ ನಡುಗುಡ್ಡೆ, ಝೈನುದ್ದೀನ್ ಪಾಂಡೇಲ್, ಹಕೀಂ ಪಾಂಡೇಲ್, ಜಬ್ಬಾರ್ ಕುಚ್ಚಿಗುಡ್ಡೆ, ಅನ್ವರ್ ಗೋಳಿಪಡ್ಪು, ನಝೀರ್ ಕೆಳಗಿನಕೆರೆ, ಶಫೀಕ್ ಗುಡ್ಡೆ, ಸತ್ತಾರ್, ಸೌರಾಝ್ ಇಮ್ರಾನ್ ಆಂಬ್ಯುಲೆನ್ಸ್ ಮೂಲಕ ಸುಶೀಲಮ್ಮರ ಮೃತದೇಹವನ್ನು ಸಮೀಪದ ಬಡಕಬೈಲಿನ ರುಧ್ರಭೂಮಿಗೆ ಸಾಗಿಸಿ, ಅಲ್ಲಿ ವಿಧಿವಿಧಾನಕ್ಕೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು ಖರೀದಿಸಿದ ಬಳಿಕ ೬,೦೦೦ ರೂ. ಪಾವತಿಸಿ ತಡರಾತ್ರಿ ಅಂತ್ಯಸಂಸ್ಕಾರ ನೆರವೇರಿಸಿದರು.