ಮಂಗಳೂರು, ಸೆ 5(MSP) : ಮಳೆಯ ಅವಾಂತರದಿಂದ ಆಗಾಗ ಭರ್ಜರಿ ರಜೆಯನ್ನು ಸವಿದಿದ್ದ ದಕ್ಷಿಣ ಕನ್ನಡದ ಶಾಲಾ ಮಕ್ಕಳ ಮಧ್ಯಾಂತರ ರಜೆಗೆ ಕತ್ತರಿ ಬಿದ್ದಿದೆ, ಮಾತ್ರವಲ್ಲ ಶೈಕ್ಷಣಿಕ ಅವಧಿಯನ್ನು ಕೂಡಾ ಮರು ನಿಗದಿಗೊಳಿಸಿದೆ.ಮಳೆಯ ಕಾರಣದ ರಜೆಯಿಂದ ಕೊರತೆಯಾಗಿರುವ ದಿನಗಳನ್ನು ಸರಿದೂಗಿಸುವ ಹಿನ್ನಲೆಯಲ್ಲಿ ದ. ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಶೈಕ್ಷಣಿಕ ಅವಧಿ ಹಾಗೂ ರಜಾ ಅವಧಿಯನ್ನು ಮರುನಿಗದಿಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ.
ಅ.7 ರಿಂದ ಅ.21 ರ ವರೆಗೆ ನಿಗದಿಯಾಗಿದ್ದ ಮಧ್ಯಾಂತರ ರಜೆಗೆ ಕತ್ತರಿ ಪ್ರಯೋಗಿಸಿ ಕೇವಲ ಅ.14 ರಿಂದ ಅ.21 ರವರೆಗೆ ಏಳು ದಿನಗಳ ರಜೆಯನ್ನು ಮರು ನಿಗದಿಪಡಿಸಲಾಗಿದೆ. ಈ ಸಂಬಂಧ ಈಗಾಗಲೇ ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಗೆ ಪತ್ರ ರವಾನಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಸುರಿದಿದ್ದ ಜೂನ್ ನಿಂದ ಆಗಸ್ಟ್ ವರೆಗೆ ವಿಪರೀತ ಮಳೆ ಸುರಿದ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಒಟ್ಟು 9 ದಿನ ರಜೆ ಘೋಷಣೆಯಾಗಿತ್ತು. ಸುಳ್ಯ , ಪುತ್ತೂರು, ಬಂಟ್ವಾಳ ವಲಯದಲ್ಲಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಕೆಲವು ದಿನಗಳ ರಜೆ ಘೋಷಿಸಿಲಾಗಿತ್ತು.ಹೀಗಾಗಿ ರಜೆಯ ಅವಧಿಯನ್ನು ಕಡಿತಗೊಳಿಸಿದ್ದಲ್ಲದೆ , ಒಂದು ವೇಳೆ ಅವಧಿ ಕೊರತೆಯಾದಲ್ಲಿ ವಿದ್ಯಾರ್ಥಿಗಳ ಕಲೆಗೆ ತೊಂದರೆಯಾಗದಂತೆ ಶಾಲಾ ಹಂತದಲ್ಲಿ ಶನಿವಾರದಂದು ಪೂರ್ಣದಿನ ಮತ್ತು ಸ್ಥಳೀಯ ರಜೆಯನ್ನು ಕಡಿಮೆ ಮಾಡಿ ಸರಿದೂಗಿಸಬಹುದಾಗಿದೆ
ಮಧ್ಯಾವಧಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಅ.7 ರಿಂದ ಅ.14 ರ ನಡುವಿನ ಮರುಹೊಂದಾಣಿಕೆಯ ಕರ್ತವ್ಯದ ದಿನಗಳು ಒಳಗೊಂಡಂತೆ ಆಯಾ ಶಾಲಾ ಹಂತದಲ್ಲಿ ರೂಪಿಸಬೇಕು ಹಾಗೂ ಸೆಪ್ಟಂಬರ್ ಪೂರ್ಣ ತಿಂಗಳನ್ನು ಬೋಧನೆಗೆ ಬಳಸಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.