ಬಂಟ್ವಾಳ, ಸೆ 5(MSP): ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದನಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಬಿ.ಸಿ.ರೋಡಿನ ವೃತ್ತ ಬಳಿ ಮಂಗಳೂರು ಡಿಸಿಐಬಿ ಪೊಲೀಸರು ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿ ಈತನಿಂದ ಪಿಯೆಟ್ ಪುಂಟೋ ಕಾರನ್ನು ವಶಪಡಿಸಿದ್ದಾರೆ.ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ಮಹಮ್ಮದ್ ಇಲಾಲ್ ಯಾನೆ ಇಲಾಲ್( 25) ಬಂಧಿತ ಆರೋಪಿಯಾಗಿದ್ದಾನೆ.
ಮಹಮ್ಮದ್ ಇಲಾಲ್
ಸೆ.೪ ರ ಮಂಗಳವಾರ ಮುಂಜಾನೆ ಮಂಗಳೂರು ಡಿಸಿಐಬಿ ಪೊಲೀಸರ ತಂಡ ರಾತ್ರಿ ಗಸ್ತಿನಲ್ಲಿದ್ದಾಗ ಬಿ.ಸಿರೋಡ್ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ, ಚಾಲಕ ಇಲಾಲ್ ನನ್ನು ಬಂಧಿಸಿ ಕಾರು ಸಹಿತ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಪ್ರಕರಣದಲ್ಲಿ ಅಮ್ಮಮ್ಮಾರ್ನ ನಿವಾಸಿ ಮನ್ಸೂರ್ಯಾನೆ ಮಂಚು, ಅರಫಾ ಯಾನೆ ಅಬುಬಕ್ಕರ್ ಸಿದ್ದಿಕ್, ಜೈನು ಯಾನೆ ಜೈನುದ್ದೀನ್ ಮತ್ತು ಫಾರೂಕ್ ಎಂಬವರು ತಲೆ ಮರೆಸಿಕೊಂಡಿದ್ದಾರೆ. ಆರೋಪಿ ಮನ್ಸೂರ್ ಯಾನೆ ಮಂಚು ಎಂಬಾತನ ಮೇಲೆ ದನಕಳವು ಹಾಗೂ ದನ ಸಾಗಾಟಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 5 ಪ್ರಕರಣಗಳು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ , ಉಪ್ಪಿನಂಗಡಿ ಪೊಲೀಸ್ ಠಾಣೆ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ತಲಾ1 ಪ್ರಕರಣ ಸೇರಿ ಒಟ್ಟು 8 ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿ ಜೈನು ಯಾನೆ ಜೈನುದ್ದೀನ್ ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ 3 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|ರವಿಕಾಂತೇಗೌಡ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ,ಜೆ ರವರ ನಿರ್ದೇಶನದಂತೆ ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಸುನೀಲ್ ವೈ ನಾಯಕ್ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಯವರಾದ ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಇಕ್ಬಾಲ್ ಎ.ಇ, ಉದಯ ರೈ, ಪ್ರವೀಣ್ ಎಂ, ತಾರಾನಾಥ್ ಮತ್ತು ಶೋನ್ಶಾರವರು ಭಾಗವಹಿಸಿದ್ದರು.