ಬೆಂಗಳೂರು, ಸೆ 4(SM): ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ರಾಜ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಈ ಹಿನ್ನೆಲೆ ಕೆ ಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಏರಿಕೆಗೊಳಿಸುವುದು ಅನಿವಾರ್ಯ ಎಂದು ರಾಜ್ಯ ಸಾರಿಗೆ ಸಚಿವ ತಮ್ಮಣ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿನಿತ್ಯ ಎಂಬಂತೆ ಏರಿಕೆಯಾಗುತ್ತಿದೆ. ಇದರಿಂದಾಗಿ ಸಾರಿಗೆ ಇಲಾಖೆ ನಷ್ಟದಲ್ಲಿದೆ. ರಾಜ್ಯದ ವಿವಿದೆಡೆಗಳಲ್ಲಿ ಸಂಚರಿಸುವಂತಹ ಖಾಸಗಿ ಬಸ್ ಗಳು ದರ ಏರಿಸುತ್ತಲೇ ಇವೆ. ಆದರೆ, ಸರಕಾರಿ ಬಸ್ ಪ್ರಯಾಣ ದರದಲ್ಲಿ ಮಾತ್ರ ಯಾವುದೇ ಬದಲಾವಣೆ ತಂದಿಲ್ಲ. ಹೀಗಾಗಿ ನಷ್ಟ ಸರಿದೂಗಿಸಲು ಪ್ರಯಾಣ ದರ ಹೆಚ್ಚಳ ಅಗತ್ಯವಾಗಿದೆ ಎಂದರು.
ಸರಕಾರಿ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಲ್ಲಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ. ಈಗಾಗಲೇ ಶೇ.18ರಷ್ಟು ಟಿಕೆಟ್ ದರ ಏರಿಕೆ ಮಾಡಬೇಕೆಂಬ ಪ್ರಸ್ತಾವನೆ ಬಂದಿದೆ. ಅದನ್ನು ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ರಾಜ್ಯದ ಎಲ್ಲೆಡೆ ಸರಕಾರಿ ಬಸ್ ಸೇವೆ ಒದಗಿಸುತ್ತೇವೆ. ಈ ಮೂಲಕ ಖಾಸಗಿಯವರಿಗೆ ಕಡಿವಾಣ ಹಾಕಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ 21 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ಸಾರಿಗೆ ಸಂಸ್ಥೆ ಮೇಲೆ ಪರಿಣಾಮ ಬೀರಿದೆ. ನಾವು ಈ ಸಂದರ್ಭದಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಹೇಳಿದರು.