ಬೆಂಗಳೂರು, ಸೆ 4 (MSP): ತಮ್ಮ ಗನ್ಮ್ಯಾನ್ ನಿಂದ ಶೂಗಳಿಗೆ ಮೆತ್ತಿರುವ ಕೊಳೆಯನ್ನು ಒರೆಸಿಕೊಂಡು ಸುದ್ದಿಯಾಗಿದ್ದಾರೆ ಡಿಸಿಎಂ ಡಾ.ಜಿ.ಪರಮೇಶ್ವರ್ . ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿರುವ ಪರಮೇಶ್ವರ್ ಅವರು ಸೆ.೦೪ ರ ಮಂಗಳವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸಿಟಿ ರೌಂಡ್ಸ್ ಗೆ ಆಗಮಿಸಿದ್ದರು. ಹಲಸೂರಿನ ಗುರುದ್ವಾರದ ಬಳಿ ಉಪಮುಖ್ಯಮಂತ್ರಿ ಆಗಮಿಸಿದಾಗ ರಸ್ತೆಯಲ್ಲಿದ್ದ ಕೆಸರು ನೀರು ಪರಮೇಶ್ವರ್ ಅವರ ಸ್ವಚ್ಚವಾದ ಬಿಳಿ ಬಟ್ಟೆಗಳಿಗೆ ಹಾರಿದೆ.
ತಕ್ಷಣ ಅಲ್ಲೇ ಇದ್ದ ಕಾಂಗ್ರೆಸ್ ಬೆಂಬಲಗರೊಬ್ಬರು ಪರಮೇಶ್ವರ್ ಅವರ ಬಟ್ಟೆ ಹಾಗೂ ಶೂ ಸ್ವಚ್ಚಗೊಳಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ತಡೆದ ಡಿಸಿಎಂ ಗನ್ ಮ್ಯಾನ್ ಬಳಿ ಸ್ವಚ್ಚಗೊಳಿಸುವಂತೆ ತಿಳಿಸಿದ್ದಾರೆ. ಗನ್ ಮ್ಯಾನ್ ಅಲ್ಲಿ ನೆರೆದಿದ್ದ ನೂರಾರು ಜನರ ಮುಂದೆ ಕರವಸ್ತ್ರ ಬಳಸಿ ನೀರಲ್ಲಿ ಅದ್ದಿ ಕೊಳೆ ಒರೆಸಿ ಸ್ವಚ್ಚಗೊಳಿಸಿದ್ದಾನೆ.
ಪರಮೇಶ್ವರ್ ಅವರ ಈ ನಡೆಯನ್ನು ಹಲವಾರು ಮಂದಿ ಟೀಕಿಸಿದ್ದು, ಹೋದಲೆಲ್ಲಾ ಹಾರಾ ಹಾಕಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುವ ಡಿಸಿಎಂ ಅವರ ಬಟ್ಟೆ , ಶೂ ಕೊಳೆಯಾಗದಂತ ಕಾಟಾಚಾರದ ಸಿಟಿ ರೌಂಡ್ಸ್ ಅಗತ್ಯವಿದೆಯಾ ಎಂಬ ಆಕ್ರೋಶ ಕೇಳಿಬರುತ್ತಿದೆ. ಸಚಿವರ ಈ ನಡೆಯನ್ನು ಮಾಧ್ಯಮದವರು ಪ್ರಶ್ನಿಸಿದಾಗ ಸಿಡುಕಿನಿಂದಲೇ ಉತ್ತರಿಸಿದ ಪರಮೇಶ್ವರ್ ಅವರು ''ಇದೇನು ಇಂಟರ್ ನ್ಯಾಷನಲ್ ನ್ಯೂಸಾ'' ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.