ಬಂಟ್ವಾಳ, ಸೆ 4 (MSP): ಕರಾವಳಿಯಲ್ಲಿ ಅತಿವೃಷ್ಟಿ ಹಾಗೂ ಕೊಳೆರೋಗದಿಂದ ಕೃಷಿಕರ ಜೀವನಾಡಿ ಅಡಿಕೆ ಕೃಷಿ ವ್ಯಾಪಕ ನಷ್ಟ ಎದುರಿಸುವಂತಾಗಿ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಸರ್ಕಾರ ರೈತರಿಗೆ ಎಕರೆಗೆ ಎರಡು ಲಕ್ಷ ರೂ ಪರಿಹಾರ ನೀಡುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕಿನ ಅಡಿಕೆ ಬೆಳೆಗಾರರ ಒಕ್ಕೂಟ ರೈತ ಸಂಘ ಹಾಗೂ ಹಸಿರು ಸೇನೆ ಇವರ ಸಂಯುಕ್ತ ಆಶ್ರಯದಲ್ಲಿ ಬಿಸಿರೋಡು ತಾಲೂಕು ಕಚೇರಿಯ ಮುಂಭಾಗದಲ್ಲಿ ಸೆ. 04 ರ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.
ಕೊಳೆರೋಗದಿಂದ ಬಿದ್ದಿರುವ ಅಡಿಕೆಗಳನ್ನು ತಾಲೂಕು ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ರಾಶಿ ಹಾಕಿದ ರೈತರು ತಮ್ಮ ಅಳಲು ತೋಡಿಕೊಂಡು, ಅಡಿಕೆ ಕೊಳೆರೋಗದಿಂದ ಕಂಗಾಲಾದ ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅಡಿಕೆ ಕೊಳೆರೋಗದಿಂದ ನಷ್ಟ ಅನುಭವಿಸಿದ ರೈತರ ತೋಟಗಳ ಸರ್ವೆ ನಡೆಸುವಂತೆ ಸರಕಾರ ಆದೇಶ ಮಾಡಿದರೂ ಕೂಡಾ ಬಂಟ್ವಾಳ ತಾಲೂಕಿನ ತಹಶಿಲ್ದಾರರು ಮಾತ್ರ ಆದೇಶದ ಬಂದಿಲ್ಲ ಎಂದು ಹೇಳಿ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಈ ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದ್ದು, ತಕ್ಷಣ ಪರಿಹಾರ ಬಿಡುಗಡೆ ಮಾಡುವಂತೆ ಪ್ರತಿಭಟಕಾರರು ಒತ್ತಾಯಿಸಿದರು. ಈ ಸಂದರ್ಭ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ್ ಶೆಟ್ಟಿ ಗುತ್ತು, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೌಬ್ರಮಣ್ಯ ಭಟ್, ಒಕ್ಕೂಟದ ಸದಸ್ಯ ಸಂಜೀವ್ ಪೂಜಾರಿ ಪಂಜಿಕಲ್ಲು ಹರಿಕೃಷ್ಣ ಬಂಟ್ವಾಳಮತ್ತಿತರರು ಉಪಸ್ಥಿತರಿದ್ದರು.