ಭೋಪಾಲ್, ಸೆ 4 (MSP): ಯಾವುದೇ ಪಕ್ಷದಿಂದ ಚುನಾವಣೆಗೆ ನಿಲ್ಲಲು ಹಣಬಲ ಹಾಗೂ ಜನಬಲ ಇದ್ದರೆ ಸಾಕು ಎಂಬುವುದು ತೀರಾ ಹಳೆಯದಾದ ಮಾತು. ಆದರೆ ಈ ಮಾತು ಸದ್ಯದಲ್ಲೇ ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಮಾಮೂಲಿ ಫೇಸ್ ಬುಕ್ ಟ್ವಿಟ್ವರ್ ಅಕೌಂಟ್ ಎಲ್ಲರಲ್ಲೂ ಇರುತ್ತದೆ. ಇದೇ ರೀತಿ ಜನನಾಯಕರಿಗೂ ಇನ್ಮುಂದೆ ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ಇದ್ದರೆ ಸಾಕಾಗುವುದಿಲ್ಲ. ಹಣ ಬಲ , ಜನ ಬಲದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಫಾಲೋವರ್ಸ್ ಬಲ ಕೂಡಾ ಇನ್ಮುಂದೆ ಟಿಕೆಟ್ ಗಿಟ್ಟಿಸಿಕೊಳ್ಳಲು ಕೌಂಟ್ ಆಗುತ್ತೆ. ಟಿಕೆಟ್ ಬೇಕು ಅಂದರೆ ಸಾಮಾಜಿಕ ಜಾಲತಾಣ ಡಿಟೇಲ್ಸ್ ಕೊಡಿ ಎಂದು ಚುನಾವಣೆಯ ಹೊಸ್ತಿಲಲ್ಲಿ ಇರುವ ಮಧ್ಯಪ್ರದೇಶ ಕಾಂಗ್ರೆಸ್, ಟಿಕೆಟ್ ಆಕಾಂಕ್ಷಿಗಳಿಗೆ ಹೊರಡಿಸಿರುವ ಷರತ್ತು.
ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಬೇಕಂದ್ರೆ ಪ್ರತೀ ನಾಯಕರೂ ಕೂಡ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಅಕೌಂಟ್ ಹೊಂದಿರುವುದು ಕಡ್ಡಾಯ.ಇಷ್ಟು ಮಾತ್ರವಲ್ಲ ಟಿಕೆಟ್ ಬೇಕು ಎಂದ್ರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳಿ ಎಂದು ಖಡಕ್ ಸೂಚನೆ ನೀಡಿದೆ.
ಕನಿಷ್ಟ ಫೇಸ್ ಬುಕ್ ನಲ್ಲಿ 15 ಸಾವಿರ ಲೈಕ್ ಹಾಗೂ ಟ್ವಿಟ್ಟರ್ ನಲ್ಲಿ 5 ಸಾವಿರ ಫಾಲೋವರ್ಸ್ ಗಳನ್ನು ಹೊಂದಿದ್ದರೆ ಮಾತ್ರ ಅವರ ಹೆಸರುಗಳನ್ನು ಮುಂದೆ ಟಿಕೆಟ್ ಗೆ ಪರಿಗಣಿಸಲಾಗುತ್ತದೆ ಇಲ್ಲವಾದಲ್ಲಿ ಇಲ್ಲ. ಜತೆಗೆ ಟಿಕೆಟ್ ಆಕಾಂಕ್ಷಿಗಳು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಹಾಗೂ ವಿವಿಧ ವಾಟ್ಸಾಪ್ ಗ್ರೂಪ್ ಗಳಲ್ಲಿ ಸಕ್ರೀಯರಾಗಿರಬೇಕು. ಹಾಗೂ ಮದ್ಯಪ್ರದೇಶ ಕಾಂಗ್ರೆಸ್ ಘಟಕ ಮಾಡಿರುವ ಟ್ವೀಟ್ ಗಳನ್ನು ರೀಟ್ವೀಟ್ ಮಾಡಿರಬೇಕು ಎಂದಿರುವ ಕಾಂಗ್ರೆಸ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸೆಪ್ಟೆಂಬರ್ 15ರ ಒಳಗೆ ಸಲ್ಲಿಸಲು ಸೂಚನೆ ನೀಡಿದೆ.