ಮಂಗಳೂರು, ಸೆ 3 (MSP): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಎಂಟು ಸ್ಥಾನಗಳಲ್ಲಿ ಏಳು ಸ್ಥಾನಗಳನ್ನು ತನ್ನದಾಗಿಸಿ ಬೀಗಿದ್ದ ಬಿಜೆಪಿ ಇದೀಗ ಮತ್ತೊಮ್ಮೆ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲೂ ತನ್ನ ಕೋಟೆಯನ್ನು ಭದ್ರಪಡಿಸಿಕೊಂಡಿದ್ದು ,ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿಸಿದೆ.
ಪುತ್ತೂರು ನಗರಸಭೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಎಡವಿದ್ದು, 31 ಸ್ಥಾನಗಳ ಪೈಕಿ ಪುತ್ತೂರಿನಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದು ಗೆಲುವಿನ ನಗುಬೀರಿದೆ. ಇಲ್ಲಿ ಎಸ್ಡಿಪಿಐ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇನ್ನು ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆಯಲ್ಲಿ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದೆ. ಸಚಿವ ಯು ಟಿ ಖಾದರ್ ಪ್ರತಿಷ್ಠಿತ ಕ್ಷೇತ್ರವಾದ ಉಳ್ಳಾಲ ನಗರಸಭೆಯಲ್ಲಿ ಕಳೆದ ಬಾರಿ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಈ ಬಾರಿ ಬಹುಮತ ಪಡೆಯಲು ವಿಫಲವಾಗಿದೆ. 31 ಸ್ಥಾನಗಳಿರುವ ಉಳ್ಳಾಲ ನಗರಸಭೆಯಲ್ಲಿ ಅಧಿಕಾರಕ್ಕೆ ಬರಲು 16 ಸ್ಥಾನಗಳು ಅಗತ್ಯವಿದ್ದು, ಕಾಂಗ್ರೆಸ್ ಕೇವಲ 13 ಸ್ಥಾನವನ್ನು ಪಡೆದಿದೆ. ಇಲ್ಲಿ ಎಸ್ಡಿಪಿಐ ಮತ್ತು ಬಿಜೆಪಿ ತಲಾ ಆರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ಜೆಡಿಎಸ್ ನಾಲ್ಕು ಸ್ಥಾನ ಪಡೆದುಕೊಂಡಿದ್ದ್ರೆ, ಇಬ್ಬರು ಪಕ್ಷೇತರರು ಜಯಶಾಲಿಯಾಗಿದ್ದಾರೆ.
ಈಗಾಗಲೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಯು.ಟಿ ಖಾದರ್ ಉಳ್ಳಾಲದಲ್ಲಿ ಎಸ್ಡಿಪಿಐ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಇಲ್ಲಿ ಕಾಂಗ್ರೆಸ್ ಪಕ್ಷ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಇದರೊಂದಿಗೆ ಮಾಜಿ ಸಚಿವ ರಮಾನಾಥ ರೈ ಹಾಗೂ ಹಾಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಜಿದ್ದಾಜಿದ್ದಿನ ಬಂಟ್ವಾಳ ಪುರಸಭೆಯಲ್ಲಿ ಕೂಡಾ ಕಾಂಗ್ರೆಸ್, ಬಿಜೆಪಿ ಸ್ಪಷ್ಪ ಮ್ಯಾಜಿಕ್ ಸಂಖ್ಯೆ ಪಡೆದಿಲ್ಲ ಒಟ್ಟು 27 ಸ್ಥಾನಗಳಲ್ಲಿ ಯಾವುದೇ ಪಕ್ಷವೂ ಬಹುಮತ ಗಳಿಸಿಲ್ಲ. ಇಲ್ಲಿ ಆಡಳಿತ ನಡೆಸಲು 14 ಸ್ಥಾನಗಳ ಬೇಕಾಗಿದ್ದು ಇವುಗಳಲ್ಲಿ ಕಾಂಗ್ರೆಸ್12, ಬಿಜೆಪಿ 11, ಎಸ್ಡಿಪಿಐ 4 ಸ್ಥಾನಗಳನ್ನು ಹಂಚಿಕೊಂಡಿದೆ. ಪುತ್ತೂರು, ಉಳ್ಳಾಲ, ಬಂಟ್ವಾಳದ ಒಟ್ಟು 89 ವಾರ್ಡ್ ಗಳಲ್ಲಿ 42 ಭಾರತೀಯ ಜನತಾ ಪಕ್ಷ, 30 ಕಾಂಗ್ರೆಸ್ , ಜೆಡಿಎಸ್ 4 ಹಾಗೂ ಪಕ್ಷೇತರರು 13 ಮಂದಿ ಗೆಲುವು ಸಾಧಿಸಿದ್ದಾರೆ.