ಮಂಗಳೂರು, ಸೆ 3 (MSP): ನಗರ ಸ್ಥಳೀಯ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗಳ ಮತದಾನದ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಮಧ್ಯಾಹ್ನದ ವೇಳೆಗೆ ಲೋಕಲ್ ಫೈಟ್ ನ ಪೂರ್ಣ ಫಲಿತಾಂಶ ಹೊರಬೀಳಲಿದ್ದು, ಆರಂಭದಲ್ಲಿ ಕೆಲ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಪಕ್ಷಗಳ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಜೆಡಿಎಸ್ ಪ್ರಾಬಲ್ಯದ ಹಾಸನ, ಮಂಡ್ಯದಲ್ಲಿ ನಿರೀಕ್ಷೆಯಂತೆ ಮುನ್ನಡೆ ಸಾಧಿಸಿದೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಈ ಲೋಕಲ್ ಫೈಟ್ನ ಕ್ಷಣಕ್ಷಣದ ಮಾಹಿತಿಯನ್ನು ಇಲ್ಲಿ ಲಭ್ಯವಾಗಲಿದೆ
ಕುಂದಾಪುರ ಪುರಸಭೆಯಲ್ಲೀ ಬಿಜೆಪಿ ಗೆಲುವು
ಕುಂದಾಪುರ ಪುರಸಭೆಯಲ್ಲಿ 23 ವಾರ್ಡ್ ಗಳ ಪೈಕಿ ಬಿಜೆಪಿ 14 ವಾರ್ಡ್ ಗಳಲ್ಲಿ, ಕಾಂಗ್ರೆಸ್ 8 ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಬಿಜೆಪಿ ವಶಕ್ಕೆ:
ಸಾಲಿಗ್ರಾಮ ಪಟ್ಟಣ ಪಂಚಾಯತ್ ಕೂಡಾ ಬಿಜೆಪಿ ತೆಕ್ಕೆಗೆ ಬಿದ್ದಿದ್ದು, ಬಿಜೆಪಿ 10 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದಿದ್ದು, ಕಾಂಗ್ರೆಸ್ 5 ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ವಾರ್ಡ್ ನಲ್ಲಿ ಜಯ ಸಾಧಿಸಿದ್ದಾರೆ.
ಸಚಿವ ಯು.ಟಿ ಖಾದರ್ ಕ್ಷೇತ್ರ ಉಳ್ಳಾಲದಲ್ಲಿ ಅತಂತ್ರ ಫಲಿತಾಂಶ:
ಉಳ್ಳಾಲ ನಗರಸಭೆಯ ಫಲಿತಾಂಶ ಹೊರಬಿದ್ದಿದ್ದು, ಇಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದು ಮುಂಚೂಣಿಯಲ್ಲಿದ್ದರೂ ಸಂಪೂರ್ಣ ಬಹುಮತ ಗಳಿಸುವಲ್ಲಿ ಕಾಂಗ್ರೆಸ್ ಎಡವಿದೆ. ಒಟ್ಟು 31 ಸ್ಥಾನಗಳಿಗೆ ಪೈಪೋಟಿ ನಡೆದಿದ್ದು ಕಾಂಗ್ರೆಸ್ 13, ಎಸ್ಡಿಪಿಐ 6, ಬಿಜೆಪಿ 6, ಜೆಡಿಎಸ್ 4 ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಉಳ್ಳಾಲ ನಗರಸಭೆ ವಾರ್ಡ್ ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸಮಾನ ಮತಗಳನ್ನು ಹಂಚಿಕೊಂಡಿದ್ದು ಕೊನೆಗೆ ಇಲ್ಲಿ ಚೀಟಿ ಎತ್ತುವ ಮೂಲಕ ವಿಜೇತ ಅಭ್ಯರ್ಥಿಗಳನ್ನು ಆರಿಸಲಾಯಿತು. ಇದರಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಅವರು ಅದೃಷ್ಟವಶಾತ್ ಗೆಲುವು ಸಾಧಿಸಿದ್ದಾರೆ. ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು 14 ಸ್ಥಾನಗಳ ಆವಶ್ಯವಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಉಡುಪಿ: ಬಿಜೆಪಿಗೆ ಭರ್ಜರಿ ಜಯಭೇರಿ :
ಉಡುಪಿ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ. 35 ವಾರ್ಡ್ಗಳ ಪೈಕಿ 21 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡು ಭರ್ಜರಿ ಜಯಗಳಿಸಿದೆ. ಇಲ್ಲಿ ಕಾಂಗ್ರೆಸ್ ಕೇವಲ 4ರಲ್ಲಿ ಮಾತ್ರ ಜಯ ಗಳಿಸಿ ಹೀನಾಯ ಸೋಲು ಕಂಡಿದೆ. ಬಿಜೆಪಿ ಜಯಗಳಿಸುವ ಮೂಲಕ ಈ ಹಿಂದೆ ಆಡಳಿತವಿದ್ದ ಕಾಂಗ್ರೆಸ್ನಿಂದ ಉಡುಪಿ ನಗರಸಭೆಯನ್ನು ಬಿಜೆಪಿ ಮತ್ತೆ ತನ್ನ ಮುಷ್ಟಿಗೆ ಪಡೆದುಕೊಂಡಿದೆ.
ಬಂಟ್ವಾಳ ಪುರಸಭಾ ಚುನಾವಣೆ :
ಬೆಳಗ್ಗೆ 8 ಗಂಟೆಯಿಂದ ಬಿ.ಸಿ.ರೋಡ್ನ ಮಿನಿ ವಿಧಾನಸೌಧದಲ್ಲಿ ನಡೆದ ಬಂಟ್ವಾಳ ಪುರಸಭಾ ಚುನಾವಣೆ ಮತ ಎಣಿಕೆ ಕಾರ್ಯ ಕೊನೆಕೊಂಡಿದ್ದು, ಅತಂತ್ರ ಫಲಿತಾಂಶ ಹೊರಬಿದ್ದಿದೆ. ಇಲ್ಲಿನ ಒಟ್ಟು 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಲಾ ಕಾಂಗ್ರೆಸ್ 12, ಬಿಜೆಪಿ 11 ಹಾಗೂ ಎಸ್ಡಿಪಿಐ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಪಕ್ಷವೊಂದು ಅಧಿಕಾರಕ್ಕೆ ಬರಲು 14 ಸ್ಥಾನಗಳನ್ನು ಪಡೆಯಬೇಕಾಗಿದ್ದು, ಯಾವ ಪಕ್ಷಗಳು ಬಹುಮತ ಪಡೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.