ಮಂಗಳೂರು, ಸೆ 2(SM): ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಮತದಾನದ ಎಣಿಕೆ ಕಾರ್ಯ ಇಂದುಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ದ.ಕ. ಜಿಲ್ಲೆಯ ಉಳ್ಳಾಲ ನಗರಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಉಳ್ಳಾಲದಲ್ಲಿ ನಡೆಯಲಿದೆ. ಪುತ್ತೂರು ನಗರಸಭೆಗೆ ನಡೆದ ಮತದಾನದ ಎಣಿಕೆ ಕಾರ್ಯ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ. ಇನ್ನು ಬಂಟ್ವಾಳ ಪುರಸಭೆಗೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ. ಇನ್ನು ಉಡುಪಿ ಜಿಲ್ಲೆಯ ಉಡುಪಿ ನಗರಸಭೆಗೆ ನಡೆದ ಚುನಾವಣೆ ಮತ ಎಣಿಕೆ ಕಾರ್ಯ ಉಡುಪಿಯಲ್ಲಿ ನಡೆಯಲಿದೆ. ಕಾರ್ಕಳ ಪುರಸಭೆಗೆ ನಡೆದ ಮತದಾನದ ಎಣಿಕೆ ಕಾರ್ಯ ತಾಲೂಕು ಕಚೇರಿಯಲ್ಲಿ ನಡೆಯಲಿದೆ. ಇನ್ನು ಕುಂದಾಪುರ ಪುರಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಿನಿವಿಧಾನ ಸೌಧದಲ್ಲಿ ನಡೆಯಲಿದೆ. ಇನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಮತ ಎಣಿಕೆ ಕಾರ್ಯಕೂಡ ನಾಳೆ ನಡೆಯಲಿದೆ. ಇನ್ನುಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಂದು ನಿಷೇಧಾಜ್ಞೆ:
ಇನ್ನು ಇಂದು ನಗರ ಸ್ಥಳಿಯಾಡಳಿತ ಚುನಾವಣೆಯ ಮತ ಎಣಿಕೆ ಹಿನ್ನೆಲೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಮತಎಣಿಕೆ ನಡೆಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರ ತನಕ ನಿರ್ಬಂಧಕಾಜ್ಞೆ ಜಾರಿಯಲ್ಲಿರಲಿದೆ. ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 35ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಬಂಟ್ವಾಳ ಪುರಸಭಾ ವ್ಯಾಪ್ತಿ, ಪುತ್ತೂರು ಹಾಗೂ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಯಾವುದೇ ರೀತಿಯ ಮೆರವಣಿಗೆಗಳಿಗೆ, ವಿಜಯೋತ್ಸವಕ್ಕೆ ಈ ಸಂದರ್ಭದಲ್ಲಿ ಅವಕಾಶವನ್ನು ನಿರಾಕರಿಸಲಾಗಿದೆ.