ಪಡುಬಿದ್ರೆ, ಸೆ 02(MSP): ನವಯುಗ ಕಂಪೆನಿಯು, ಹೆಜಮಾಡಿಯಲ್ಲಿರುವ ಹಳೆ ಎಂಬಿಸಿ ಟೋಲ್ಗೇಟ್ ಅಳವಡಿಸಿ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ಸರ್ವೀಸ್ ಬಸ್ ಹಾಗೂ ಇತರ ವಾಹನ ಸವಾರರು, ಟೋಲ್ ಗೇಟ್ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ದಿಢೀರ್ ಆಗಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಘಟನೆ ಸೆ. 2 ರ ಭಾನುವಾರ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಸಮೀಪ ನವಯುಗ ಕಂಪೆನಿ ಟೋಲ್ ಗೇಟ್ ಆರಂಭಿಸಿ ಟೋಲ್ ಸಂಗ್ರಹಿಸಲು ಆರಂಭಿಸಿತ್ತು. ಆದರೆ ಟೋಲ್ ತಪ್ಪಿಸಲೆಂದು ಟೋಲ್ ಸಂಗ್ರಹ ಕೇಂದ್ರದ ಸಮೀಪದಲ್ಲೇ ಇರುವ ಹೆಜಮಾಡಿ ಹಳೆ ಎಂಬಿಸಿ ರಸ್ತೆಯಲ್ಲಿ ವಾಹನಗಳು ಸಂಚಾರಿಸಲು ಪ್ರಾರಂಭಿಸಿದವು. ಇದನ್ನು ಅರಿತ ನವಯುಗ ಕಂಪನಿ ಗುಡ್ಡೆಯಂಗಡಿ ಬಳಿ ಒಳರಸ್ತೆಗೂ ಟೋಲ್ ಗೇಟ್ ಮಾಡಿ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಸರ್ವೀಸ್ ಬಸ್ಸು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮಾತುಕತೆ ನಡೆಸಿ ಎರಡು ದಿನಗಳ ಕಾಲ ಸರ್ವೀಸ್ ಬಸ್ಸುಗಳಿಗೆ ಟೋಲ್ ನಿಂದ ವಿನಾಯಿತಿ ನೀಡಿ ಮುಂದೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ವಿಷಯ ತಿಳಿದು ಪ್ರತಿಭಟನೆಗೆ ಸಾಥ್ ನೀಡಿದ ಸ್ಥಳೀಯರು ಸ್ಕೂಲ್ ಬಸ್ , ಸ್ಥಳೀಯ ವಾಹನ ಹಾಗೂ ಗೂಡ್ಸ್ ವಾಹನಗಳು ದಿನಂಪ್ರತಿ ಹೆಜಮಾಡಿಗೆ ಬರುವ ಕಾರಣ ಅವುಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.