ಸೆ,02 (MSP): ಕತಾರ್ ದೇಶವೂ ಭಯೋತ್ಪಾದನೆಯನ್ನು ಬೆಂಬಲಿಸಿ ಪೋಷಿಸುತ್ತಿದೆ ಎಂದು ಆರೋಪಿಸುತ್ತಿರುವ ಗಲ್ಫ್ ರಾಷ್ಟ್ರಗಳು ಕತಾರ್ ನನ್ನು ದ್ವೀಪರಾಷ್ಟವನ್ನಾಗಿಸಲು ಚಿಂತನೆ ನಡೆಸಿದೆ. ಹೌದು ಇದಕ್ಕಾಗಿ 4 ಸಾವಿರ ಕೋಟಿ ವೆಚ್ಚದ ಯೋಜನೆಯೊಂದನ್ನು ರೂಪಿಸುತ್ತಿದ್ದು ಒಂದು ವೇಳೆ ಈ ಯೋಜನೆ ಪೂರ್ಣಗೊಂಡರೆ ಕತಾರ್ ಸಂಪೂರ್ಣವಾಗಿ ದ್ವೀಪರಾಷ್ಟವಾಗುವುದಂತು ಸತ್ಯ.
ಕತಾರ್ ದೇಶ ಸೌದಿ ಅರೇಬಿಯಾದೊಂದಿಗೆ ಮಾತ್ರ ಭೂಗಡಿಯನ್ನು ಹಂಚಿಕೊಂಡಿದ್ದು, ಈ ಗಡಿ ಭಾಗದಲ್ಲಿ ಬೃಹತ್ ನಾಲೆಗಳನ್ನು ನಿರ್ಮಾಣ ಮಾಡಲು ಸೌದಿ ಅರೇಬಿಯಾ ಯೋಜನೆ ಹಾಕಿಕೊಂಡಿದೆ. ಈ ಯೋಜನೆ ಪ್ರಕಾರ ಸುಮಾರು 60 ಮೈಲು ಉದ್ದದ ನಾಲೆ ನಿರ್ಮಾಣವಾಗಲಿದ್ದು ,ಇದು 200 ಮೀಟರ ಅಗಲ ಇರಲಿದೆ.ಈ ನಾಲೆಯ ಒಂದಿಷ್ಟು ಭಾಗವನ್ನು ಪರಮಾಣು ತ್ಯಾಜ್ಯವನ್ನು ಸುರಿಯುವುದಕ್ಕೆಂದೇ ಬಳಸಲಾಗುತ್ತದೆ. ಆದರೆ ಈ ಬಗ್ಗೆ ಸೌದಿ ಅರೇಬಿಯಾದ ರಾಜ ಮನೆತನವಾಗಲೀ ಅಥವಾ ಕತಾರ್ನ ಅಧಿಕಾರಿಗಳಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕತಾರ್ ಪುಟ್ಟ ದೇಶವಾದರೂ ಅತ್ಯಂತ ಶ್ರೀಮಂತ ದೇಶ. ಇಲ್ಲಿ ಯಥೇಚ್ಚವಾಗಿರುವ ತೈಲ ಮತ್ತು ನೈಸರ್ಗಿಕ ಅನಿಲ ಈ ದೇಶದ ಶ್ರೀಮಂತಿಕೆಗೆ ಕಾರಣ. ಆದರೆ ಭಯೋತ್ಪಾದನೆಗೆ ಕತಾರ್ ಆರ್ಥಿಕ ಬೆಂಬಲ ನೀಡಿ ಪೋಷಿಸುತ್ತಿದೆ ಎಂಬ ಆರೋಪ ಈ ದೇಶದ ಮೇಲಿದೆ. ಹೀಗಾಗಿ ಕತಾರ್ ದೇಶದ ಜತೆಗೆ ಸುತ್ತಲಿನ ದೇಶಗಳು ವಾಯು , ಜಲ ಮತ್ತು ಭೂಸಂಪರ್ಕವನ್ನು ಕಡಿತಗೊಳಿಸಿ ಕತಾರ್ ನ್ನು ಏಕಾಂಗಿಯನ್ನಾಗಿಸಿದೆ. ಉಗ್ರರಿಗೆ ನೆರವು ನೀಡುವುದನ್ನು ಸ್ಥಗಿತಗೊಳಿಸುವಂತೆ ಗಲ್ಫ್ ರಾಷ್ಟ್ರಗಳು ಎಚ್ಚರಿಸುತ್ತಾ ಬಂದರೂ ಕತಾರ್ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಇದು ಗಲ್ಫ್ ರಾಷ್ಟ್ರಗಳನ್ನು ಕೆರಳಿಸಿದ್ದು ಈ ದೇಶದೊಂದಿನ ಬಿಕ್ಕಟ್ಟು ಹೆಚ್ಚಾಗುತ್ತಲೇ ಸಾಗಿದೆ.