ಚಿಕ್ಕಬಳ್ಳಾಪುರ, ಸೆ 02 (MSP): ಹಸು ತಿವಿದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಹೊರಟಿದ್ದ ಪತಿರಾಯನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೂರಪ್ಪರೆಡ್ಡಿ ಎಂದು ಗುರುತಿಸಲಾಗಿದ್ದು, ಈತನ ಪತ್ನಿ ರತ್ನಮ್ಮ(42) ಹತ್ಯೆಯಾದ ದುರ್ದೈವಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡರೆಡ್ಡಿಹಳ್ಳಿಯಲ್ಲಿ ಈ ದಂಪತಿಗಳು ವಾಸವಿದ್ದು, ಸೂರಪ್ಪರೆಡ್ಡಿ ತನ್ನ ತೋಟದ ಕೆಲಸ ಮುಗಿಸಿ ಮಧ್ಯಾಹ್ನದ ವೇಳೆ ಊಟಕ್ಕೆಂದು ಮನೆಗೆ ಬಂದಿದ್ದನು. ಆದರೆ ಈ ವೇಳೆ ಪತ್ನಿ ರತ್ನಮ್ಮ ಮೊಬೈಲ್ ನಲ್ಲಿ ಮಾತನಾಡುತ್ತಿದ್ದನ್ನು ಕಂಡು ಕುಪಿತನಾದ ಆತ ಜಗಳ ಪ್ರಾರಂಭಿಸಿದ್ದಾನೆ. ಕೊನೆಗೆ ಇವರ ಗಲಾಟೆ ತಾರಕಕ್ಕೇರಿ ಸೂರಪ್ಪ ರೆಡ್ಡಿ ರತ್ನಮ್ಮಳಿಗೆ ಕಪಾಳಮೋಕ್ಷ ಮಾಡಿದ್ದಷ್ಟೇ ಅಲ್ಲದೆ ಆಕೆಯನ್ನು ಎಳೆದಾಡಿ ,ತಲೆಯನ್ನ ಹಿಡಿದು ಗೋಡೆಗೆ ಬಡಿದ್ದಾನೆ. ಇದರ ಪರಿಣಾಮ ರತ್ನಮ್ಮ ಕುಸಿದುಬಿದ್ದಿದ್ದಾಳೆ. ಬಳಿಕ ಗಾಬರಿಗೊಂಡ ಗಂಡ ಸೂರಪ್ಪ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಚಿಕ್ಕಬಳ್ಳಾಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಆದ್ರೆ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ರತ್ನಮ್ಮ ಅದಾಗಲೇ ಮೃತಪಟ್ಟಿದ್ದಳು.
ರತ್ನಮ್ಮ ಮೃತಪಟ್ಟ ಕಾರಣವನ್ನು ತಿಳಿಸದ ಸೂರಪ್ಪರೆಡ್ಡಿ, ಆಕೆ ಮನೆ ಬಳಿ ಹಸು ತಲೆಗೆ ತಿವಿದು ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರೆಲ್ಲರನ್ನು ನಂಬಿಸಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದಾನೆ. ಆದರೆ ರತ್ನಮ್ಮಳ ಸಹೋದರನಿಗೆ ಅಕ್ಕನ ಸಾವಿನ ಬಗ್ಗೆ ಅನುಮಾನಗೊಂಡ ಸಹೋದರ ಮಹೇಶ್ ಈ ಬಗ್ಗೆ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದನು. ದೂರು ಸ್ವೀಕರಿಸಿದ್ದ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಸೂರಪ್ಪರೆಡ್ಡಿ ನಡೆದ ಸತ್ಯ ಘಟನೆಯನ್ನು ಬಾಯ್ಬಿಟ್ಟಿದ್ದಾನೆ. ಗುಡಿಬಂಡೆ ಪೊಲೀಸರು ಪ್ರಕರಣ ಸಂಬಂಧಪಟ್ಟಂತೆ ಸೂರಪ್ಪ ರೆಡ್ಡಿಯನ್ನ ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.