ಪಡುಬಿದ್ರಿ, ಸೆ 02(MSP): ದರೋಡೆಕೋರರ ತಂಡವೊಂದು ಎಟಿಎಂ ಕಾವಲುಗಾರನನ್ನು ಕಟ್ಟಿ ಹಾಕಿ ಹತ್ತಿರವಿದ್ದ ಧನಲಕ್ಷ್ಮಿ ಜುವೆಲ್ಲರ್ಸ್ ಮತ್ತು ಮೊಬೈಲ್ ಅಂಗಡಿಯನ್ನು ದೋಚಿದ ಘಟನೆ ಶನಿವಾರ ಮಧ್ಯರಾತ್ರಿ 1 ಗಂಟೆ ವೇಳೆಗೆ ಪಡುಬಿದ್ರಿಯ ಕೆಳಗಿನ ಪೇಟೆಯಲ್ಲಿ ನಡೆದಿದೆ.
ರಾಜೇಶ್ ಎಂಬವರಿಗೆ ಸೇರಿದ ಎವರ್ ಗ್ರೀನ್ ಅಂಗಡಿಗೆ ನುಗ್ಗಿದ ದರೋಡೆಕೋರರು 1.8 ಲಕ್ಷ ರೂಪಾಯಿ ಮೌಲ್ಯದ 22 ಮೊಬೈಲ್ ಗಳನ್ನು ಕಳ್ಳರು ದೋಚಿದ್ದಾರೆ. ಸಮೀಪದ ಇನ್ನೊಂದು ಕಟ್ಟಡದಲ್ಲಿರುವ ನಾರಾಯಣ ಆಚಾರ್ಯ ಎಂಬರಿಗೆ ಸೇರಿದ ಶ್ರೀ ಧನಲಕ್ಷ್ಮೀ ಅಭರಣ ಮಳಿಗೆಗೆ ನುಗ್ಗಿದ ಕಳ್ಳರು ಸುಮಾರು 40 ಸಾವಿರ ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿದ್ದಾರೆ.
ಮಧ್ಯರಾತ್ರಿ ವೇಳೆಗೆ ಪಡುಬಿದ್ರಿ ಕೆಳಗಿನ ಪೇಟೆಯಲ್ಲಿದ್ದ ಅಂಗಡಿಗಳಿಗೆ ದರೋಡೆಕೋರರ ಗುಂಪು ನುಗ್ಗಿದೆ. ಇದಕ್ಕೂ ಮೊದಲು ಹತ್ತಿರವಿದ್ದ ಕರ್ಣಾಟಕ ಬ್ಯಾಂಕ್ ಏಟಿಎಂನ ಕಾವಲುಗಾರರನ್ನು ಗಮನಿಸಿ ಆತನನ್ನು ಬಾಯಿಯನ್ನು ಬಟ್ಟೆಯಿಂದ ಕಟ್ಟಿ ನಂತರ ಕಟ್ಟಡದ ಹಿಂದೆ ಇರುವ ಪೊದೆಯ ಬಳಿಯ ಹಲಸಿನ ಮರಕ್ಕೆ ಕಟ್ಟಿ ಹಾಕಿದ್ದಾರೆ. ನಂತರ ಎರಡು ಅಂಗಡಿಗಳ ಬೀಗ ಮುರಿದು ದರೋಡೆ ನಡೆಸಿದ್ದಾರೆ.
ಏಟಿಎಂ ನ ಸಿಬ್ಬಂದಿಯ ಮಾಹಿತಿಯಂತೆ ಸುಮಾರು 4 ರಿಂದ 5 ಮಂದಿ ಇದ್ದು, ಟೀ ಶರ್ಟ್ ಹಾಗೂ ತ್ರಿಪೋರ್ಥ್ ಶಾಟ್ಸ್ ಧರಿಸಿದ್ದ ಅವರು ನನ್ನ ಕೈ ಮುಖಕ್ಕೆ ಬಟ್ಟೆಯಿಂದ ಕಟ್ಟಿ ಚಾಕು ತೋರಿಸಿ ಬೊಬ್ಬೆ ಹಾರಿದ್ದಂತೆ ಬೆದರಿಸಿ ನನ್ನನ್ನು ಒದೆಗೆ ಎಸೆದು ಹೋಗಿದ್ದಾರೆ ಎಂದರು.
ಭೂತ ಎಂದು ಭಯಪಟ್ಟರು:
ಬೆಳಗಿನ ಜಾವ ಪೇಪರ್ ಹಾಕಲೆಂದು ಹೋಗಿದ್ದ ಸ್ಥಳೀಯ ಸುರೇಶ್ ಆಚಾರ್ಯ ಅವರಿಗೆ ಪೊದೆಯ ಹಿಂದಿನಿಂದ ಕೀರಲು ಶಬ್ದ ಕೇಳಿಸಿತ್ತು. ವಿಚಿತ್ರ ಶಬ್ದ ಕೇಳಿ ಸುರೇಶ್ ಆಚಾರ್ಯ ಭೂತ ಎಂದು ಹೆದರಿ ತಮ್ಮ ದ್ವಿ ಚಕ್ರ ವಾಹನ ಸಮೇತ ಭಯದಿಂದ ಪರಾರಿಯಾದರು. ಬಳಿಕ ಸ್ಥಳೀಯ ಸುಧಾಕರ್ ಮೊಯಿಲಿ ಅವರೊಂದಿಗೆ ಸ್ಥಳಕ್ಕೆ ಬಂದ ಸುರೇಶ್ ಆಚಾರ್ಯ ಟಾರ್ಚ್ ಬೆಳಕಿನಿಂದ ಪೊದೆಯಲ್ಲಿ ಹುಡುಕಾಟದೊಡಗಿದ್ದಾರೆ. ಅಲ್ಲಿ ಎಟಿಎಂ ಕಾವಲುಗಾರ ಕಟ್ಟಿ ಹಾಕಿದ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ಬಳಿಕ ಅವರನ್ನು ಬಿಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಆಗಷ್ಟೇ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಪಡುಬಿದ್ರಿ ಪೊಲೀಸರು ಶ್ವಾನ ದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.