ಉಡುಪಿ, ಸೆ 02 (MSP): ನಾಡಿನೆಲ್ಲೆಡೆ ಇಂದು ಶ್ರೀ ಕೃಷ್ಣಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪೊಡವಿಗೊಡೆಯನ ಬೀಡು ಉಡುಪಿ ಕೂಡಾ ಶ್ರೀ ಕೄಷ್ಣ ಜನ್ಮಾಷ್ಟಮಿಗೆ ಸಜ್ಜುಗೊಂಡಿದೆ. ಉಡುಪಿಯಲ್ಲಿ ಇಂದು ಕೃಷ್ಣ ಜಯಂತಿ ನಡೆದರೆ, ಸೆ.೩ ರಂದು ಕೃಷ್ಣ ಜನನದ ಸಂಭ್ರಮಾಚರಣೆ ಶ್ರೀ ಕೃಷ್ಣ ಲೀಲೋತ್ಸವ - ವಿಟ್ಲಪಿಂಡಿ ವಿಜೃಭಣೆಯಿಂದ ನಡೆಯಲಿದೆ. ಇನ್ನು ಉಡುಪಿಯ ಕೃಷ್ಣ ಬೀದಿ ಜನ್ಮಾಷ್ಟಮಿಯ ಸಂಭ್ರಮಕ್ಕೆ ಸಾಕ್ಷಿಯಾದರೆ, ಉಡುಪಿಯಲ್ಲಿ ವೇಷಧಾರಿಗಳ ಕಲರವ, ಹೂ ವ್ಯಾಪಾರಿಗಳ ಚಟುವಟಿಕೆ ಗರಿಕೆದರಿದೆ.
ಕೃಷ್ಣನ ಆರಾಧನೆ ನಡೆಯುವಲ್ಲೆಲ್ಲಾ ವಿಶೇಷ ಕಾರ್ಯಕ್ರಮಗಳೊಂದಿಗೆ ನಡೆಯುವ ಶ್ರೀ ಕೃಷ್ಣ ಜಯಂತಿ ಹಾಗೂ ವಿಟ್ಲಪಿಂಡಿ ಕಾರ್ಯಕ್ರಮಗಳಿಗೆ ಉಡುಪಿ ಸಜ್ಜಾಗಿದೆ. ವಿಟ್ಲಪಿಂಡಿಯ ಲೀಲೋತ್ಸವ, ಬಣ್ಣಗಳ ಓಕುಳಿಯಾಟಕ್ಕಾಗಿ ಈಗಾಗಲೇ ನಾಡಿನ ನಾನಾ ಭಾಗಗಳಿಂದ ಜನತೆ ಉಡುಪಿಯಲ್ಲಿ ಸೇರತೊಡಗಿದ್ದಾರೆ. ಉಡುಪಿ ನಗರ ಶ್ರೀಕೃಷ್ಣನ ಹುಟ್ಟಿನ ಹಬ್ಬಾಚರಣೆಗೆ ಸಿಂಗಾರವಾಗಿದೆ.
ಶ್ರೀಕೃಷ್ಣಮಠದ ಶ್ರೀಕೃಷ್ಣಜನ್ಮಾಷ್ಟಮಿ ಹಬ್ಬದಲ್ಲಿ ಉಂಡೆ, ಚಕ್ಕುಲಿ ಪ್ರಸಾದ ವಿತರಣೆ ವರ್ಷಂಪ್ರತಿ ನಡೆಯುತ್ತದೆ. ಜನ್ಮಾಷ್ಟಮಿ ಮರುದಿನ ವಿಟ್ಲಪಿಂಡಿ ಹಬ್ಬದಂದು ಸಾರ್ವಜನಿಕರಿಗೆ ಪ್ರಸಾದರೂಪವಾಗಿ ಉಂಡೆ, ಚಕ್ಕುಲಿಗಳನ್ನು ವಿತರಿಸಲಾಗುತ್ತದೆ. ಒಂದೇ ದಿನದಲ್ಲಿ ಇಷ್ಟೊಂದು ಚಕ್ಕುಲಿ, ಉಂಡೆಗಳನ್ನು ತಯಾರಿಸುವುದು ಕಷ್ಟದಾಯಕವಾದ ಕಾರಣ ಮೂರ್ನಾಲ್ಕು ದಿನಗಳಿಂದಲೇ ತಯಾರಿಸುವ ಕೆಲಸ ನಡೆಯುತ್ತಿದೆ. ಸತತ ಮೂರು ದಿನ 1೦೦ಕ್ಕೂ ಹೆಚ್ಚು ಜನರು ಉಂಡೆ, ಚಕ್ಕುಲಿ ತಯಾರಿಸುವ ಕೆಲಸದಲಿ ತೊಡಗಿಸಿಕೊಳ್ಳುತ್ತಾರೆ. 15 ಕ್ವಿಂಟಾಲ್ ಚಕ್ಕುಲಿ ಹಿಟ್ಟು, 35 ಕ್ವಿಂಟಾಲ್ ಉಂಡೆ ಹಿಟ್ಟು, ಅರಳನ್ನು ಬಳಸಿ, ೧ ಲಕ್ಷದ ೫೦ ಸಾವಿರ ಚಕ್ಕುಲಿ ಹಾಗೂ ಗುಂಡಿಟ್ಟು ಲಾಡು, ಅರಳುಂಡೆ ತಯಾರಿಸಲಾಗಿದೆ. ಜನ್ಮಾಷ್ಟಮಿ ದಿನ ಬೆಳಗ್ಗೆ ಪರ್ಯಾಯ ಶ್ರೀಗಳವರು ಸ್ವತಃ ಉಂಡೆ ಕಟ್ಟುವುದು, ಇದೇ ಉಂಡೆಗಳನ್ನು ರಾತ್ರಿ ದೇವರಿಗೆ ಸಮರ್ಪಿಸುವುದು ವಿಶೇಷ.
ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿಯ ಹಿನ್ನಲೆಯಲ್ಲಿ ಮಡಿಕೇರಿ ಮತ್ತು ಕುಶಾಲನಗರದಲ್ಲಿರುವ ನೆರೆ ಸಂತ್ರಸ್ತರ ಶಿಬಿರಗಳಿಗೆ ಹಾಗೂ ಚಿಣ್ಣರ ಸಂತರ್ಪಣೆಯ 120ಕ್ಕೂ ಅಧಿಕ ಶಾಲೆಗಳ 37,500 ಮಕ್ಕಳಿಗೆ ಸೆ.4 ರಂದು ಕೃಷ್ಣ ಪ್ರಸಾದ ಕಳುಹಿಸಲು ನಿರ್ಧರಿಸಲಾಗಿದೆ.