ನವದೆಹಲಿ, ಸೆ (MSP): ವಿವಾಹದ ವಿಚಾರದಲ್ಲಿ ಹೆಣ್ಣು-ಗಂಡಿನ ವಯಸ್ಸಿನಲ್ಲಿ ತಾರತಮ್ಯ ಏಕೆ ಎಂದು ಪ್ರಶ್ನಿಸಿರುವ ರಾಷ್ಟೀಯ ಕಾನೂನು ಆಯೋಗ, ಪುರುಷ ಹಾಗೂ ಮಹಿಳೆಯ ವಿವಾಹದ ವಯೋಮಿತಿಯನ್ನು 18 ಕ್ಕೆ ನಿಗದಿಪಡಿಸಿವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಮದುವೆ ವಿಚಾರದಲ್ಲಿ ಹುಡುಗ ಮತ್ತು ಹುಡುಗಿಯರಿಗೆ ಬೇರೆ ಬೇರೆ ವಯಸ್ಸು ನಿಗದಿಪಡಿಸುವುದು ಅರ್ಥಹೀನ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಹುಡುಗರಿಗೆ 18 ವರ್ಷಕ್ಕೆ ಮತ ಚಲಾಯಿಸುವ ಹಕ್ಕು ಇರಬೇಕಾದರೆ ಮದುವೆ ಯಾಕಾಗಬಾರದು? ಎಂದು ಆಯೋಗ ಪ್ರಶ್ನಿಸಿದೆ. ಈಗಿರುವ ಕಾನೂನನ್ನು ತಿದ್ದುಪಡಿ ಮಾಡಲು ಸೂಚಿಸಿದೆ. ಸಮಾನತೆಗೆ ನೈಜ ಅರ್ಥ ನೀಡಬೇಕಿದ್ದರೆ ಮದುವೆಯ ವಯೋಮಿತಿಯನ್ನು ಕೂಡಾ ಒಂದೇ ಆಗಿರಬೇಕು ಎಂದು ಸಮಲೋಚನಾ ಪತ್ರದಲ್ಲಿ ಹೇಳಿದೆ. ಇದರಿಂದ ಬಾಲ್ಯ ವಿವಾಹಕ್ಕೆ ನಿಯಂತ್ರಣ ಹೇರಬಹುದಾಗಿದೆ. ಮದುವೆ ಸಂದರ್ಭದಲ್ಲಿ ಪುರುಷರು ಮಹಿಳೆಯರಿಗಿಂತ ಸಣ್ಣ ವಯಸ್ಸಿನವರಾಗಬೇಕು ಎಂಬ ಅಪನಂಬಿಕೆ ದೂರವಾಗಲಿದೆ ಎಂದು ಆಯೋಗ ವಾದಿಸಿದೆ.
ಇದಲ್ಲದೆ 16 ವರ್ಷದೊಳಗಿನ ಹುಡುಗಿಯನ್ನು ಮದುವೆಯಾಗುವುದು ಅಥವಾ ಒಪ್ಪಿಸಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು 'ಅತ್ಯಾಚಾರ' ಎಂದು ಪರಿಗಣಿಸಬೇಕು ಎಂದು ಆಯೋಗ ಹೇಳಿದೆ. ಈ ಸಂಬಂಧದ ಎರಡು ವರದಿಗಳನ್ನು ಕೇಂದ್ರ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಅವರಿಗೆ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಆರ್.ಲಕ್ಷ್ಮಣನ್ ಸಲ್ಲಿಸಿದ್ದಾರೆ. ಒಂದು ವೇಳೆ ಈ ಕಾನೂನು ಜಾರಿಯಾಗಿದ್ದೇ ಆದರೆ, 16 ವರ್ಷದೊಳಗಿನ ಪತ್ನಿ ಅಥವಾ ಪ್ರಿಯತಮೆಯ ಜೊತೆ ಲೈಂಗಿಕ ಸಂಬಂಧ ಹೊಂದಿದವರಿಗೆ ಕಾನೂನು ಶಿಕ್ಷೆ ವಿಧಿಸುತ್ತದೆ. ಲೈಂಗಿಕ ಸಂಬಂಧಕ್ಕೆ ಹುಡುಗಿ ಸಮ್ಮತಿ ಇತ್ತೆಂದು ಹೇಳಿದರೂ ಶಿಕ್ಷೆ ತಪ್ಪುವುದಿಲ್ಲ. ಬಾಲ್ಯ ವಿವಾಹವನ್ನು ಬುಡಸಮೇತ ಕಿತ್ತೊಗೆಯಬೇಕು ಎನ್ನುವುದು ಆಯೋಗ ಗುರಿ ಎಂದು ಆಯೋಗದ ಸದಸ್ಯೆ ಕೀರ್ತಿ ಉಪ್ಪಾಲ್ ಹೇಳಿದ್ದಾರೆ.