ಮಂಗಳೂರು, ಸೆ 2 (MSP): ಬಿಜೈ ಸಮೀಪ ಸರಕಾರಿ ಹಾಗೂ ಖಾಸಗಿ ಬಸ್ ನಿರ್ವಾಹಕರ ಮಧ್ಯೆ ಸೆ. ಆ. 31 ರ ಶುಕ್ರವಾರ ಹೊಡೆದಾಟ ನಡೆದಿದ್ದು, ಎರಡು ತಂಡಗಳ ವಿರುದ್ಧ ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ಬಸ್ ಬರುತ್ತಿದ್ದಾಗ ಖಾಸಗಿ ಬಸ್ ಚಾಲಕ ಬಸ್ಸನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಲ್ಲದೆ ಟಿಕೇಟ್ ಮೆಷಿನ್ ಎಳೆದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕೆಎಸ್ಸಾರ್ಟಿಸಿ ಬಸ್ ಚಾಲಕ ರಾಜೇಶ್ ಸಾಬು ದೂರಿನಲ್ಲಿ ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ನವರು ನಮ್ಮ ಬಸ್ನ್ನು ಮುಂದಕ್ಕೆ ತೆರಳದಂತೆ ಅಡ್ಡಿಪಡಿಸಿದ್ದು, ಪ್ರಶ್ನಿಸಿದಾಗ ಕೆಟ್ಟದಾಗಿ ಬೈದು ಹಲ್ಲೆ ನಡೆಸಿದ್ದಾರೆ ಎಂದು ಖಾಸಗಿ ಬಸ್ ನಿರ್ವಾಹಕ ಪ್ರಶಾಂತ್ ಪ್ರತಿ ದೂರು ನೀಡಿದ್ದಾರೆ.
ಬಸ್ನವರ ಹೊಡೆದಾಟದಿಂದ ಸುಮಾರು ಅರ್ಧ ತಾಸು ಬಿಜೈ ಮೈನ್ ರೋಡ್ ನಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಸ್ನಲ್ಲಿದ್ದ ಪ್ರಯಾಣಿಕರು ಸಮಾಧಾನಪಡಿಸಲು ಪ್ರಯತ್ನಿಸಿದ್ದರೂ, ಕೇಳದೆ ಹೊಡೆದಾಡಿಕೊಂಡಿದ್ದಾರೆ. ಇತ್ತಂಡಗಳ ದೂರು ದಾಖಲಿಸಿಕೊಂಡಿರುವ ಉರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.