ಮಂಗಳೂರು, ಸೆ01(SS): ಕೇಂದ್ರ ಸರಕಾರ ನಿರಂತರವಾಗಿ ತೈಲ ದರವನ್ನು ಏರಿಕೆ ಮಾಡುತ್ತಿರುವುದರಿಂದ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ನಗದದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ 12 ಬಾರಿ ಡಿಸೇಲ್ ಮತ್ತು ಪೆಟ್ರೋಲ್ ದರ ಏರಿಕೆ ಮಾಡಲಾಗಿದೆ. ಈ ಮೂಲಕ ತೈಲ ದರದಲ್ಲಿ ದೇಶದ ಜನತೆಯನ್ನು ಕೇಂದ್ರ ಸರಕಾರ ಲೂಟಿ ಮಾಡುತ್ತಿದೆ. ದೇಶದಲ್ಲಿ ಪ್ರತಿ ಲೀಟರ್ ಡೀಸೆಲ್ಗೆ 70 ರೂ, ಪೆಟ್ರೋಲ್ಗೆ 78 ರೂಪಾಯಿಗೆ ಏರಿಕೆಯಾಗಿದೆ. 2014ರಲ್ಲಿ ಕ್ರೂಡ್ ಆಯಿಲ್ ಬ್ಯಾರೆಲ್ಗೆ 102 ಡಾಲರ್ ಇದ್ದದ್ದು, ಮೂರುಪಟ್ಟು ಕಡಿಮೆಯಾಗಿದೆ. ಆದರೆ ದೇಶದಲ್ಲಿ ಮಾತ್ರ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಜನರನ್ನು ವಂಚಿಸುವ ಕೆಲಸ ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ದೂರಿದರು.
ಕೇಂದ್ರ ಸರಕಾರ ನಿರಂತರವಾಗಿ ತೈಲ ದರವನ್ನು ಏರಿಕೆ ಮಾಡುತ್ತಿರುವುದರಿಂದ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ರೈತರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ದೇಶದ ಕಾವಲುಗಾರ ಎಂದು ಮಾತಿನಲ್ಲೇ ಮೋಡಿ ಮಾಡುತ್ತಿರುವ ನರೇಂದ್ರ ಮೋದಿ ದೇಶದ ಸಂಪತ್ತಿನಲ್ಲಿ ಪಾಲುದಾರನಾಗಲು ಮುಂದಾಗುತ್ತಿದ್ದಾರೆ. ಪ್ರಧಾನಿ ಮೋದಿ ಯಾರಿಗೆ ಸಹಾಯ ಮಾಡಲು ಹೊರಟಿದ್ದಾರೆ ಎಂದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿರುವ ಜನಸಾಮಾನ್ಯರ ನೋವಿಗೆ ಸ್ಪಂದಿಸಲು ಹಲವು ಬಾರಿ ಮನವಿ ಸಲ್ಲಿಸಿದೆ. ಆದರೆ ಮೋದಿ ನೇತೃತ್ವದ ಕೇಂದ್ರ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದ್ದಾರೆ.