ಬಂಟ್ವಾಳ, ಮಾ 24 (DaijiworldNews/MS): ನಿವೃತ್ತ ಸೇನಾಧಿಕಾರಿಯೊಬ್ಬರಿಗೆ ನ್ಯಾಯಾಲಯದ ಆದೇಶವಿದ್ದರೂ ಜಮೀನು ಮಂಜೂರು ಮಾಡದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಹಶೀಲ್ದಾರ್ ಕೆ. ರಶ್ಮಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸಲು ಹೈಕೋರ್ಟ್ ತೀರ್ಮಾನಿಸಿದೆ.
ಪ್ರಕರಣದ ಕುರಿತು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಸ್ ಕೆ ಭಟ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ .ಎ .ಎಸ್ ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ತಹಶೀಲ್ದಾರ್ ರಶ್ಮಿ ಅವರು ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ, ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿ ಮಾಡಲಾಗುವುದು. ಮುಂದಿನ ವಿಚಾರಣೆ ವೇಳೆ ರಶ್ಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಿರಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 31ಕ್ಕೆ ಮುಂದೂಡಿದೆ.