ಮಂಗಳೂರು, ಸೆ 1(SM): ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಜಿಲ್ಲೆಯ ಉಳ್ಳಾಲ, ಪುತ್ತೂರು ನಗರಸಭೆಗಳಿಗೆ ಹಾಗೂ ಬಂಟ್ವಾಳ ಪುರಸಭೆಗೆ ಮತದಾನ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 68.50% ಮತದಾನ ನಡೆದಿದೆ. ಬಂಟ್ವಾಳ ಪುರಸಭೆಯಲ್ಲಿ 72.36% ಮತದಾನವಾಗಿದೆ. ಉಳ್ಳಾಲ ನಗರಸಭೆಯಲ್ಲಿ 65.36% ಮತ ಚಲಾವಣೆಯಾಗಿದೆ. ಪುತ್ತೂರು ನಗರಸಭೆಯಲ್ಲಿ ಒಟ್ಟು 68.69% ಮತದಾನವಾಗಿದೆ.
ಜಿಲ್ಲೆಯ 2 ನಗರಸಭೆ ಹಾಗೂ 1 ಪುರಸಭೆಗೆ 89 ವಾರ್ಡ್ ಗಳ ಪ್ರತಿನಿಧಿಗಳ ಆಯ್ಕೆಗೆ ಮತದಾನ ನಡೆದಿದೆ. ಜಿಲ್ಲೆಯಲ್ಲಿ 250 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರ ಭವಿಷ್ಯ ಇದೀಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಸೆಪ್ಟೆಂಬರ್ 3ರ ಸೋಮವಾರದಂದು ಅಭ್ಯರ್ಥಿಗಳ ಭವಿಷ್ಯ ಪ್ರಕಟಗೊಳ್ಳಲಿದೆ.