ಮಡಿಕೇರಿ/ಹಟ್ಟಿಹೊಳೆ, ಆ31(SS): ವೀರರ ನಾಡು ಕೊಡಗಿನಲ್ಲಿ ನೆರೆಯಿಂದ ಅರಗಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರಿ ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತ ಯುವತಿಯೊಬ್ಬಳಿಗೆ ಯುವಕನೊಬ್ಬ ಬಾಳು ಕೊಟ್ಟು ಮಾನವೀಯತೆ ಮೆರೆದ ಘಟನೆ ನಡೆದಿದೆ.
ಅರೆಕಲ್ಲುವಿನ ಧನಂಜಯ, ಹಟ್ಟಿಹೊಳೆಯ ಕುಸುಮಾ ಅವರಿಗೆ ಬಾಳು ಕೊಟ್ಟ ಯುವಕ. ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ವಿವಾಹ ನಡೆದಿದ್ದು, ವರನ ಕಡೆಯವರು ಸಂಪೂರ್ಣ ವೆಚ್ಚ ಭರಿಸಿ ಯುವತಿಯನ್ನು ವಿವಾಹವಾಗಿದ್ದಾರೆ.
ನಗರದಲ್ಲಿರುವ ಓಂಕಾರ ಸದನದಿಂದ ವಾದ್ಯಗೋಷ್ಠಿಯ ಮೂಲಕ ವಧು-ವರನನ್ನು ಕರೆ ತರಲಾಗಿದ್ದು, ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಮಾಂಗಲ್ಯ ಕಾರ್ಯಕ್ರಮ ನಡೆಯಿತು. ನಂತರ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆರತಕ್ಷತೆ ನಡೆದಿದ್ದು. ವಿವಾಹದಲ್ಲಿ ಬಂಧು ಮಿತ್ರರು ಸೇರಿದಂತೆ ಪ್ರಮುಖರು ಪಾಲ್ಗೊಂಡು ನವ ದಂಪತಿಗೆ ಶುಭ ಕೋರಿದ್ದಾರೆ.
ಕೊಡಗಿನಲ್ಲಿ ಉಂಟಾದ ಜಲ ಪ್ರವಾಹದಿಂದ ಉಮೇಶ್ ಪದ್ಮಿನಿ ದಂಪತಿ ಮನೆ ಸಂಪೂರ್ಣವಾಗಿ ಕುಸಿದು ಹೋಗಿತ್ತು. ಅದೃಷ್ಟವಶಾತ್ ಅಪಾಯದಿಂದ ಮನೆಯವರು ಪಾರಾಗಿದ್ದರೂ, ಮಗಳು ಕುಸುಮಳಾ ಮದುವೆಗಾಗಿ ಸಂಗ್ರಹಿಸಿಟ್ಟಿದ್ದ ಒಡವೆ, ಬಟ್ಟೆ ಸೇರಿದಂತೆ ಇನ್ನಿತರ ಬೆಲೆ ಬಾಳುವ ವಸ್ತುಗಳು ಮಣ್ಣು ಪಾಲಾಗಿದ್ದವು. ಈ ಘಟನೆಯಿಂದ ಕುಸುಮಾ ಅವರ ಕುಟುಂಬ ಆತಂಕಕ್ಕೆ ಒಳಗಾಗಿತ್ತು.
ಇದೀಗ ವರನ ಕಡೆಯವರ ಸಹಕಾರದಿಂದ ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಬೇಕಿದ್ದ ವಿವಾಹ ದೇವಾಲಯದಲ್ಲಿ ಸರಳವಾಗಿ ನಡೆದಿದ್ದು, ಅರೆಕಾಡುವಿನ ಧನಂಜಯ ಅವರ ಮಾನವೀಯತೆಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.