ಮಂಗಳೂರು, ಮಾ.22 (DaijiworldNews/HR): ಬಿಜೆಪಿ ಶಾಸಕರುಗಳ ಅಶ್ಲೀಲ ಸಿಡಿಯ ಬಗ್ಗೆ ಸಮಗ್ರ ತನಿಖೆ ಮಾಡಲು ಎಸ್ಐಟಿ ರಚಿಸಿದ ಬಿಜೆಪಿ ಸರಕಾರಕ್ಕೆ ತನ್ನದೇ ಪಕ್ಷದ ಒಬ್ಬ ಕಾರ್ಯಕರ್ತನ ಭೀಕರ ಕೊಲೆಯ ಹಿಂದಿರುವ ಸತ್ಯವನ್ನು ಬಯಲಿಗೆಳೆಯಲು, ಸಮಗ್ರ ತನಿಖೆ ನಡೆಸಲು ಎಸ್ಐಟಿ ರಚಿಸಲು ಯಾಕೆ ಅಸಾದ್ಯ? ಎಂದು ವಿಚಾರವಾದಿ ಪ್ರೋ ನರೇಂದ್ರ ನಾಯಕ್ ಅವರು ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆ ಪ್ರಕರಣಕ್ಕೆ ಐದು ವರುಷ ಸಂದ ಈ ದಿನದಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ನಡೆಸಿದ ಮೆರವಣೆಗೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
"ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅಕ್ರಮಗಳ, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ ಕಾರಣಕ್ಕಾಗಿಯೇ ಕೊಲೆಗೀಡಾಗಿದ್ದಾರೆ. ಪೊಲೀಸ್ ಇಲಾಖೆ ಕೊಲೆಗಟುಕರನ್ನಷ್ಟೇ ಬಂಧಿಸಲಾಗಿದೆ ಹೊರತು ಕೊಲೆಯ ಹಿಂದಿರುವ ಸೂತ್ರಧಾರಿಗಳನ್ನು ಬಂಧಿಸೋದಾಗಲಿ ಅಥವಾ ಪ್ರಕರಣವನ್ನು ಸಂಪೂರ್ಣ ಭೇದಿಸಲು ಈವರೆಗೂ ಸಾದ್ಯವಾಗಿಲ್ಲ. ಈ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು ಹಾಗಾಗಿ ಉನ್ನತಮಟ್ಟದ ತನಿಖೆ ಎಸ್ಐಟಿ ನೇಮಕ ಆಗಬೇಕು ಅದು ಆಗುವವರೆಗೆ ಬಾಳಿಗಾ ಸಾವಿನ ನ್ಯಾಯಕ್ಕಾಗಿ ನಡೆಯುವ ಹೋರಾಟ ಎಂದು ನಿಲ್ಲುವುದಿಲ್ಲ" ಎಂದು ಎಚ್ಚರಿಸಿದರು.
ಈ ವೇಳೆ ಡಿವೈಎಫ್ಐ ರಾಜ್ಯ ಅದ್ಯಕ್ಷರಾದ ಮುನೀರ್ ಕಾಟಿಪಳ್ಳ, ಡಿಎಸ್ಎಸ್ ರಾಜ್ಯ ಮುಖಂಡರಾದ ಎಂ ದೇವದಾಸ್, ಮನೋವೈದ್ಯರು ಡಾ ಪಿ.ವಿ ಭಂಡಾರಿ , ಮಂಜುಳಾ ನಾಯಕ್, ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ಸುನಿಲ್ ಬಜಿಲಕೇರಿ, ಸುಧಾಕರ ಶೆಣೈ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಿಎಸ್ಎಸ್ ಜಿಲ್ಲಾ ಮುಖಂಡರಾದ ರಘು ಎಕ್ಕಾರ್, ಜೆರಾಲ್ಡ್ ಟವರ್, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್ , ಪ್ರಸಾದ್ ಬಜಿಲಕೇರಿ, ಡಾ ಕೃಷ್ಣಪ್ಪ ಕೊಂಚಾಡಿ, ಗುಲಾಬಿ ಬಿಳಿಮಲೆ, ಆಶಾ ನಾಯಕ್, ಎರಿಕ್ ಲೋಬೋ, ಶ್ಯಾಮ್ ಸುಂದರ್ ರಾವ್, ವಾಸುದೇವ ಉಚ್ಚಿಲ, ಪ್ರಭಾಕರ ಕಾಪಿಕಾಡ್, ಬಾಳಿಗಾ ಅವರ ಸಹೋದರಿ ಅನುರಾಧ ಬಾಳಿಗ, ಹರ್ಷ ಬಾಳಿಗ ಉಪಸ್ಥಿತರಿದ್ದರು.