ಉಡುಪಿ, ಮಾ 21(DaijiworldNews/MS): ಪೆಟ್ರೋಲ್ , ಡಿಸೇಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆ, ಜಿಲ್ಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ನಿಧಿ ಕ್ರೋಡಿಕರಿಸಲು, ವಿನೂತನ ಬಹುಮಾನದ ಲಕ್ಕಿಡಿಪ್ ನ್ನು ತಂಡವೊಂದು ಪ್ರಸ್ತುತಪಡಿಸಿದೆ. ಬರೇ ಲಕ್ಕಿಡಿಪ್ ಆಗಿದ್ದರೆ ಇದು ಯಾರ ಗಮನವೂ ಸೆಳೆಯುತ್ತಿರಲಿಲ್ಲವೇನೋ..ಆದರೆ ಇದರ ಬಹುಮಾನ ವಿಜೇತರಿಗೆ ಸಿಗಲಿದೆ ಪೆಟ್ರೋಲ್, ಡಿಸೇಲ್, ಗ್ಯಾಸ್.!
ಹೌದು. ಏಪ್ರಿಲ್ 4ರಂದು ಜಿಲ್ಲೆಯಲ್ಲಿ ಪ್ರೆಂಡ್ಸ್ ಎಂಜಿಎಂ ತಂಡ, ಕ್ರಿಕೆಟ್ ಪಂದ್ಯಟವನ್ನು ಏರ್ಪಡಿಸಿದ್ದು, ಇದಕ್ಕಾಗಿ ಫಂಡ್ ರೈಸ್ ಮಾಡಲು ಲಕ್ಕಿಡಿಪ್ ಇಡಲಾಗಿದ್ದು, ಲಕ್ಕಿಡಿಪ್ ಗೆದ್ದವರಿಗೆ ಮೊದಲ ಬಹುಮಾನ 10 ಲೀಟರ್ ಪೆಟ್ರೋಲ್, ಲಕ್ಕಿಡಿಪ್ನ ದ್ವಿತೀಯ ಬಹುಮಾನ 5 ಲೀಟರ್ ಡೀಸೆಲ್ ಹಾಗೂ ತೃತೀಯ ಬಹುಮಾನವನ್ನಾಗಿ ವಾಹನಕ್ಕೆ ಬಳಸುವ 3 ಲೀಟರ್ ಗ್ಯಾಸ್ ನೀಡಲಾಗುತ್ತಿದೆ.
ಲಕ್ಕಿಡಿಪ್ನ ಒಂದು ಚೀಟಿ ಖರೀದಿಗೆ 15 ರೂಪಾಯಿ ಮಾತ್ರ. ಪಂದ್ಯ ನಡೆಯುವ ದಿನವೇ ಡ್ರಾ ಕೂಡಾ ನಡೆಯಲಿದ್ದು , ಸದ್ಯ ಕಿಕ್ರೆಟ್ ತಂಡಗಳ ನೋಂದಣಿ ಕಾರ್ಯ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ನ ಬೆಲೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಲಕ್ಕಿಡಿಪ್ ಚೀಟಿಯ ಬಹುಮಾನವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಇಡಲಾಗಿದೆ.