ಜಕಾರ್ತ, ಆ30(SM): ಏಷ್ಯನ್ ಗೇಮ್ಸ್ನಲ್ಲಿ ಭಾರತ ಇಂದೂ ಕೂಡ ಸ್ವರ್ಣದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಸೋಲುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮೂಡಿಸಿದೆ. ಮಹಿಳೆಯರ 4x400 ರಿಲೆಯಲ್ಲಿ ಭಾರತೀಯ ವನಿತೆಯರ ತಂಡ ಚಿನ್ನದ ಪದಕ ಗೆದ್ದಿದೆ. ಮತ್ತೊಂದೆಡೆ ಪುರುಷರ 1500ಮೀಟರ್ ಓಟದಲ್ಲಿ ಜಿನ್ಸನ್ ಜಾನ್ಸನ್ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಮಂಜಿತ್ ಸಿಂಗ್ ನಾಲ್ಕನೇ ಸ್ಥಾನ ಪಡೆದು ಕಂಚಿನ ಪದಕದಿಂದ ವಂಚಿತರಾಗಿದ್ದಾರೆ.
ವನಿತೆಯರ ರಿಲೆಯಲ್ಲಿ ಹಿಮಾ ದಾಸ್, ಪೂವಮ್ಮ, ವಿಸ್ಮಯ, ಸರಿತಾ ಬೆನ್ ತಂಡ ಸ್ವರ್ಣ ಗೆದ್ದಿದೆ. ಆದರೆ ಪುರುಷರ ರಿಲೆ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದೆ. ಜಾನ್ಸನ್ 3.44.72 ಸೆಕೆಂಡ್ನಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಜಾನ್ಸನ್ ಅವರ ವೈಯಕ್ತಿಕ ದಾಖಲೆಯಾಗಿದೆ. ಈ ಹಿಂದೆ ಜಾನ್ಸನ್ ಪುರುಷರ 800ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದಿದ್ದರು. ಇನ್ನು ಮಹಿಳೆಯರ 1500 ಮೀಟರ್ ಓಟದಲ್ಲಿ ಭಾರತದ ಪಿ.ಯು. ಚಿತ್ರಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಡಿಸ್ಕಸ್ ಥ್ರೋ ವಿಭಾಗದ ಸ್ಪರ್ಧೆಯಲ್ಲಿ ಸೀಮಾ ಪೂನಿಯಾ 62. 26 ಮೀಟರ್ ದೂರ ಎಸೆಯುವ ಮೂಲಕ ಕಂಚು ಸಂಪಾದಿಸಿದ್ದಾರೆ.
ಸೆಮೀಸ್ನಲ್ಲಿ ಎಡವಿತು ಹಾಕಿ ಟೀಮ್:
ಇನ್ನೊಂದೆಡೆ ಭಾರತದ ಪುರುಷರ ಹಾಕಿ ಟೀಮ್ ರೋಚಕವಾಗಿ ನಡೆದ ಪಂದ್ಯದಲ್ಲಿ 2-2 ಗೋಲುಗಳಿಂದ ಮಲೇಷ್ಯಾದೊಂದಿಗೆ ಸಮಬಲ ಸಾಧಿಸಿತು. ಪರಿಣಾಮ ಪೆನಾಲ್ಟಿ ಶೂಟ್ಔಟ್ಗೆ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟ್ ಔಟ್ನಲ್ಲಿ 6-7ರಿಂದ ಭಾರತ ತಂಡ ಸೋಲುವುದರೊಂದಿಗೆ ಹಾಕಿಯಲ್ಲಿ ಚಿನ್ನದ ಬೇಟೆ ಅಂತ್ಯಗೊಂಡಿತು. ಸದ್ಯ ಭಾರತ 13 ಚಿನ್ನ, 21 ಬೆಳ್ಳಿ ಹಾಗೂ 25 ಕಂಚಿನೊಂದಿಗೆ ಒಟ್ಟು 59 ಪದಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.