ಉಳ್ಳಾಲ, ಆ 30 (MSP) : ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರೆದುರು ಅಪರಿಚಿತನೋರ್ವ ದುರ್ವರ್ತನೆ ತೋರಿದ ಘಟನೆ ಬುಧವಾರ ಸಂಜೆ ವೇಳೆ ನಡೆದಿದ್ದು, ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದ ವಿ.ವಿ ಆಡಳಿತ ವಿರುದ್ಧ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1ಗಂಟೆವರೆಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದ ಘಟನೆ ಆ. 30ರ ಗುರುವಾರ ನಡೆದಿದೆ.
ಬುಧವಾರ ಸಂಜೆ ವಿದ್ಯಾರ್ಥಿನಿಯರು ತರಗತಿ ಮುಗಿಸಿ ಹಾಸ್ಟೆಲ್ ಕಡೆಗೆ ನಡೆದುಕೊಂಡು ಹೋಗುವ ಸಂದರ್ಭ ಕನ್ನಡ ವಿಭಾಗದ ಎದುರು ಕಿರಿದಾದ ಕಾಡಿನಲ್ಲಿ ಅಪರಿಚಿತನೋರ್ವ ನಿಂತಿದ್ದನು. ಕೆಂಪು ಬಣ್ಣದ ಗ್ಲ್ಯಾಮರ್ ಬೈಕಿನಲ್ಲಿ ಬಂದಿದ್ದ ಈತ ಹಲವು ಸಮಯ ಅಲ್ಲೇ ನಿಂತಿದ್ದನು. ಅದೇ ದಾರಿಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ದಾಟುತ್ತಿದ್ದಂತೆ ಪ್ಯಾಂಟಿನ ಝಿಪ್ ತೆಗೆದು ಅಶ್ಲೀಲವಾಗಿ ಸನ್ನೆ ಮಾಡಿದವ ಮತ್ತೆಯೂ ಅಲ್ಲೇ ನಿಂತಿದ್ದನು. ತದನಂತರ ವಿದ್ಯಾರ್ಥಿನಿಯರು ಸೆಕ್ಯುರಿಟಿ ಸಿಬ್ಬಂದಿ ದೂರು ನೀಡುತ್ತಿದ್ದಂತೆ, ಬೈಕ್ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ವಿದ್ಯಾರ್ಥಿನಿಯರೆಲ್ಲರೂ ಸಹಿ ಹಾಕಿದ ದೂರಿನ ಪತ್ರವನ್ನು ವಿ.ವಿ ಕುಲಸಚಿವರಿಗೆ ಸಂಜೆಯೇ ನೀಡಿದ್ದಾರೆ. ಆದರೆ ಶುಕ್ರವಾರ ಬೆಳಗ್ಗಿನವರೆಗೂ ಕೊಣಾಜೆ ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಆಡಳಿತ ಕಚೇರಿಯೆದುರು ಗುರುವಾರ ಬೆಳಗ್ಗಿನಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ. ಉಪಕುಲಪತಿಗಳು ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು ಮಧ್ಯಾಹ್ನ 1.30 ವರೆಗೆ ಉಪಕುಲಪತಿಗಳು ಸ್ಥಳಕ್ಕಾಗಮಿಸಿದ ಬಳಿಕ ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ.
ಸಿ.ಸಿ ಟಿವಿಯಲ್ಲಿ ಪರಿಶೀಲಿಸಿ : ಘಟನೆ ನಡೆದು ಹಲವು ಗಂಟೆಗಳಾದರೂ ಆಡಳಿತದ ಅಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲಿಸಿಲ್ಲ. ಬೆಳಿಗ್ಗೆ ವಿದ್ಯಾರ್ಥಿನಿಯರನ್ನು ಕರೆದು ತೋರಿಸಿದ್ದಾರೆ. ಅದರಲ್ಲಿಯೂ ಸೂಕ್ತ ದಾಖಲೆಗಳಿರಲಿಲ್ಲ. ಈ ನಡುವೆ ಯುಪಿಎಸ್ ಸರಿಯಿಲ್ಲದೆ ಸಿಸಿಟಿವಿಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಅನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಆ ಭಾಗದ ಸಿಸಿಟಿವಿ ಕಾರ್ಯಚರಿಸದೇ ಇದ್ದರೂ, ಇತರೆ ಭಾಗದಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಿ ತಪ್ಪಿತಸ್ಥನ ವಿರುದ್ಧ ಕ್ರಮಕೈಗೊಳ್ಳಬಹುದಲ್ಲವೇ ಅನ್ನುವ ಆರೋಪಗಳು ವಿದ್ಯಾರ್ಥಿಗಳಿಂದ ಕೇಳಿಬಂತು.
ವಿಶ್ರಾಂತಿ ಕೊಠಡಿ ಇಲ್ಲ : ವಿಶ್ವವಿದ್ಯಾನಿಲಯ ಕ್ಯಾಂಪಸ್ಸಿನೊಳಗೆ ವಿದ್ಯಾರ್ಥಿನಿಯರಿಗೆ ಸರಿಯಾದ ರೆಸ್ಟ್ ರೂಂ ಇಲ್ಲ. ವಸತಿ ನಿಲಯದಲ್ಲಿ ವಾಸಿಸುವ ವಿದ್ಯಾರ್ಥಿನಿಯರಿಗೆ ಸೂಕ್ತ ಆಂಬ್ಯುಲೆನ್ಸ್ ಅಥವಾ ವಾಹನದ ವ್ಯವಸ್ಥೆಯೂ ಇಲ್ಲ. ಇತ್ತೀಚೆಗೆ ತನ್ನ ಗೆಳತಿ ಅಸೌಖ್ಯಕ್ಕೆ ಒಳಪಟ್ಟಾಗ ವಾರ್ಡನ್ ಮೂಲಕ ತಿಳಿಸಲಾಯಿತಾದರೂ ಒಂದು ಗಂಟೆ ಬಳಿಕ ಬೇರೆ ವಾಹನ ಬಂದು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸೇರಿಸುವಂತಾಗಿದೆ. ಗ್ರಂಥಾಲಯದಲ್ಲಿ ರಾತ್ರಿ ೭.೩೦ರ ವರೆಗೆ ಹೋಗಲು ಅನುಮತಿಯಿದೆ. ವಾಪಸ್ಸಾಗುವಾಗ ಹಲವೆಡೆ ದಾರಿದೀಪಗಳು ಇಲ್ಲ. ಇದರಿಂದ ವಿದ್ಯಾರ್ಥಿನಿಯರು ಸಂಚರಿಸುವುದು ಕಷ್ಟಕರವಾಗಿದೆ ಎಂದು ಆರೋಪಿಸಿದರು.
ಪ್ರತಿಯೊಂದರಲ್ಲೂ ಶುಲ್ಕದ ಮೊತ್ತವನ್ನು ಹೆಚ್ಚು ಮಾಡಲಾಗಿದೆ. ಫಲಿತಾಂಶದಲ್ಲಿಯೂ ಗೊಂದಲವಿದೆ. ಹಲವು ವಿಭಾಗಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ ಎಂಬ ಆರೋಪಗಳು ವಿದ್ಯಾರ್ಥಿಗಳಿಂದ ಕೇಳಿಬಂತು.
ಉಪಕುಲಪತಿಗಳ ಭೇಟಿ : ಸರಕಾರಿ ಕಾರ್ಯಕ್ರಮದ ನಿಮಿತ್ತ ಉಡುಪಿ ಭೇಟಿ ನೀಡಿದ ಪ್ರಭಾರ ಉಪಕುಲಪತಿಗಳಾದ ಡಾ| ಕಿಶೋರ್ ಮಧ್ಯಾಹ್ನ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನಿಸಿದರು. ದೂರು ನೀಡಿದ ಬೆನ್ನಲ್ಲೇ ಪ್ರಕರಣವನ್ನು ವಿ.ವಿ ಆಡಳಿತ ಗಂಭೀರವಾಗಿ ಪಡೆದುಕೊಂಡಿದೆ. ಸಿಸಿಟಿವಿ ದಾಖಲೆಗಳನ್ನು ಪಡೆದುಕೊಂಡಿದೆ. ಅದರಲ್ಲಿ ಪಡೆದ ಮಾಹಿತಿಯಂತೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ. ವಿದ್ಯಾರ್ಥಿನಿಯರು ಹೆಚ್ಚಾಗಿ ಅಡ್ಡ ರಸ್ತೆಯನ್ನು ಬಳಸದೆ ಮುಖ್ಯ ರಸ್ತೆಗಳಲ್ಲೇ ತೆರಳುವಂತೆ ಸೂಚಿಸಿದ್ದಾರೆ. ಕೆಲ ತಿಂಗಳುಗಳಿಂದ ಪ್ರಭಾರ ಉಪಕುಲಪತಿಗಳಾಗಿ ಕಾರ್ಯಾಚರಿಸುತ್ತಿರುವುದರಿಂದ ಆಯಾಯ ವಿಭಾಗಗಳಲ್ಲಿ ಇರುವ ಸಮಸ್ಯೆಗಳ ಪಟ್ಟಿಯನ್ನು ಆಡಳಿತ ಕಚೇರಿಯ ಗಮನಕ್ಕೆ ತಂದಲ್ಲಿ, ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳುವ ಭರವಸೆ ನೀಡಿದರು. ವಿದ್ಯಾರ್ಥಿನಿಯರ ಮೇಲೆ ಉಪನ್ಯಾಸಕರೋರ್ವರು ದೌರ್ಜನ್ಯ ಎಸಗಿದ ಪ್ರಕರಣ ದಾಖಲಾಗಿದ್ದರೂ, ಅವರನ್ನು ಅಮಾನತು ಮಾಡಲಾಗಿಲ್ಲ ಎಂಬ ವಿದ್ಯಾರ್ಥಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪಕುಲಪತಿಗಳು ಪ್ರಕರಣ ನ್ಯಾಯಾಲಯದಲ್ಲಿದೆ. ಅದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಅಸಾಧ್ಯ ಎಂದರು.
ಸ್ಥಳಕ್ಕೆ ಆಗಮಿಸಿದ ಸಹಾಯಕ ಪೊಲೀಸ್ ಆಯುಕ್ತ ಎ.ರಾಮರಾವ್ ಅವರೂ ಸೂಕ್ತ ಮಾಹಿತಿ ಸಿಕ್ಕ ತಕ್ಷಣ ಆರೋಪಿಯನ್ನು ಬಂಧಿಸಲಾಗುವುದು. ಮುಂದೆ ವಿಶ್ವವಿದ್ಯಾನಿಲಯ ಕ್ಯಾಂಪಸ್ಸಿನಲ್ಲಿ ಇಂತಹ ಘಟನೆ ಮರುಕಳಿಸುವುದಿಲ್ಲ ಎಂಬ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಮಧ್ಯಾಹ್ನವರೆಗೆ ನಡೆಸಿದ ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ.