ಬೆಳ್ತಂಗಡಿ ಆ 30 (MSP) : ಕನ್ಯಾಡಿ ಕ್ಷೇತ್ರ ನಿತ್ಯಾನಂದ ನಗರದಲ್ಲಿ ನಡೆಯುವ ಪವಿತ್ರವಾದ ಕಾರ್ಯ ಧರ್ಮಸಂಸತ್ ಯಶಸ್ವಿಗಾಗಿ ಪ್ರತಿ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆಗಸ್ಟ್ 29 ರ ಬುಧವಾರ ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಪೂರ್ವ ತಯಾರಿ ವೀಕ್ಷಿಸಿದ ಅವರು ಬಳಿಕ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸೆ. 2 ಮತ್ತು3 ರ ಧರ್ಮ ಸಂಸತ್ ಸಿದ್ದತೆ ಕಾರ್ಯಗಳನ್ನು ಪರಿಶೀಲಿಸಿದ ಅವರು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಇದರ ಯಶಸ್ಸಿಗೆ ಸಹರಿಸಬೇಕಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುವ ನಿರೀಕ್ಷೆ ಇದೆ. ಸಂಸದ್ ಗೆ ದೇಶದ ವಿವಿಧೆಡೆಯಿಂದ 2 ಸಾವಿರಕ್ಕೂ ಅಧಿಕ ಸಾಧು ಸಂತರು ಆಗಮಿಸಲಿದ್ದಾರೆ. 25 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ರಸ್ತೆ, ವಿದ್ಯುತ್, ವಸತಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.
ಸೆ. 2,3ರಂದು ವಿದ್ಯುತ್ ಕಡಿತಗೊಳಿಸಬಾರದು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವುಗೊಳಿಸುವಂತೆ, ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ಹರಿಸುವಂತೆ, ರಸ್ತೆ ದುರಸ್ತಿಗೊಳಿಸುವಂತೆ ಅಗ್ನಿಶಾಮಕ ವಾಹನಗಳನ್ನು ಅಗತ್ಯ ಸ್ಥಳಗಳಲ್ಲಿ ನಿಯೋಜಿಸಬೇಕು ಎಂದು ಆದೇಶಿಸಿದರು.
ಈ ಸಂದರ್ಭ ಶಾಸಕ ಹರೀಶ್ ಪೂಂಜಾ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರು ಸಿದ್ದತೆಯ ಕುರಿತು ಮಾಹಿತಿ ನೀಡಿದರು. ಅಧಿಕಾರಿಗಳ ಸಭೆ ನಡೆಸಿದ ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಿದ್ದತೆಯ ಕುರಿತು ಸಚಿವರಿಗೆ ವಿವರ ನೀಡಿದರು.