ವರದಿ: ಅನುಷ್ ಪಂಡಿತ್
ಮಂಗಳೂರು, ಆ29(SS): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಿಟಿ ಕ್ರೈಂ ಬ್ರಾಂಚ್(ಸಿಸಿಬಿ) ಘಟಕದ ಸಿಬ್ಬಂದಿ ಚಂದ್ರಶೇಖರ್ ಎನ್.ಎ 2017 ನೇ ಸಾಲಿನ ಮುಖ್ಯಮಂತ್ರಿಗಳ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಚಂದ್ರಶೇಖರ್ ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ನಿಡಿಯಡ್ಕದ ದಿವಂಗತ ಅಪ್ಪಯ್ಯ ಮಣಿಯಾಣಿ ಹಾಗೂ ಶ್ರೀಮತಿ ಯಮುನ ಕುಳ ದಂಪತಿಯ ಪುತ್ರ. ಇವರು ಸರ್ವೋದಯ ಹೈಸ್ಕೂಲ್ ಸುಳ್ಯಪದವು ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಶಾಲಾ ಜೀವನದಲ್ಲಿ ರಾಜ್ಯ ಮಟ್ಟದ ಜ್ಯೂನಿಯರ್ ಕಬಡ್ಡಿ ಕ್ರೀಡಾಪಟ್ಟು ಆಗಿದ್ದರು. ಮಾತ್ರವಲ್ಲ. ಪ್ರತಿಷ್ಠಿತ ಕುಳ ಮನೆತನದವರಾಗಿದ್ದಾರೆ.
1997ರಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು ನಂತರ ಪಣಂಬೂರು ಹೈವೇ ಅಪರಾಧ ದಳ, ಜಿಲ್ಲಾ ಎಸ್ಪಿ ಅಪರಾಧ ದಳ, ರೌಡಿ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಸಿಟಿ ಕ್ರೈಂ ಬ್ರಾಂಚ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಳ್ಳಾಲ ಕೆ.ಸಿ ರೋಡ್ ಜೋಡಿ ಕೊಲೆ, ಪೊಳಲಿ ಅನಂತು ಕೊಲೆ, ಉಳ್ಳಾಲ ನರಸಿಂಹ ಶೆಟ್ಟಿಗಾರ್ ಕೊಲೆ, ಕ್ಯಾಂಡಲ್ ಸಂತು ಕೊಲೆ, ಜಿಲ್ಲಾ ಕಾಂಗ್ರೆಸ್ ನಾಯಕ ಮಲ್ಲೂರು ಜಬ್ಬಾರ್ ಕೊಲೆ, ಉಳ್ಳಾಲ ರಾಜು ಕೊಟ್ಯಾನ್ ಕೊಲೆ, ತೊಕ್ಕೊಟ್ಟು ಸಫ್ಪಾನ್ ಕೊಲೆ, ಕುಖ್ಯಾತ ರೌಡಿ ಕಾಲಿಯ ರಫೀಕ್ ಮತ್ತು ಇಲಿಯಾಸ್ ಕೊಲೆ ಪ್ರಕರಣ ಭೇದಿಸುವಲ್ಲಿ ಇವರ ಪಾತ್ರ ಮುಖ್ಯವಾಗಿತ್ತು.
ಜೊತೆಗೆ ಮಂಗಳೂರು ನಗರವನ್ನು ತಲ್ಲಣಗೊಳಿಸಿದ್ದ ದೀಪಕ್ ರಾವ್ ಮತ್ತು ಕೊಟ್ಟಾರ ಚೌಕಿ ಬಶೀರ್ ಕೊಲೆ ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶರತ್ ಮಾಡಿವಾಳ ಹತ್ಯೆ, ಕಲಾಯಿ ಅಶ್ರಫ್ ಹತ್ಯೆ ಪ್ರಕರಣ, ಇತಿಹಾಸ ಪ್ರಸಿದ್ಧ ಕಟೀಲು ಕ್ಷೇತ್ರದ ಅರ್ಚಕರ ಮನೆ ದರೋಡೆ ಪ್ರಕರಣ, ಕಾಟಿಪಾಳ್ಳ SCDCC ಬ್ಯಾಂಕ್ 52 ಕೆ.ಜಿ ಚಿನ್ನ ಕಳವು ಪ್ರಕರಣ, ಪ್ರತಿಷ್ಠಿತ ಮೂಡಬಿದ್ರೆ ಜೈನ ಬಸದಿ ವಿಗ್ರಹ ಕಳವು ಪ್ರಕರಣ, ಕೌಡಿಚಾರ್ ಮತ್ತು ಪಟ್ಟೆ ಪರಿಸರದ ಬ್ರಾಹ್ಮಣರ ಮನೆಯಲ್ಲಿ ನಡೆದ ಹಗಲು ದರೋಡೆ ಪ್ರಕರಣ, ಭೂಗತ ದೊರೆ ರವಿ ಪೂಜಾರಿ ಸಹಚರ ಸುಬ್ರಹ್ಮಣ್ಯ ಬಂಧನ ಮತ್ತು ಅಕ್ರಮ ಶಸ್ತ್ರಾಸ್ತ್ರ ಪತ್ತೆ ಹಚ್ಚುವಲ್ಲಿ ಇವರ ಸಾಧನೆ ಅಪಾರವಾಗಿತ್ತು.
ಭೂಗತ ದೊರೆ ರಶೀದ್ ಮಲಬಾರಿ ದಸ್ತಗಿರಿ, ಉಳ್ಳಾಲ ಕೋಮು ಗಲಭೆ ಪ್ರಕರಣದ ಆರೋಪಿಗಳನ್ನು ಮತ್ತು ಮಂಗಳೂರು ನಗರದ ಬೃಹತ್ 52 ಕೆ.ಜಿ ಗಾಂಜಾ ಪತ್ತೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಇವರು ಮಹತ್ತರ ಪಾತ್ರ ನಿರ್ವಹಿಸಿದ್ದರು.
ಈ ಎಲ್ಲಾ ಸಾಧನೆಗಳಿಗೆ ಇಲಾಖೆ ಅಧಿಕಾರಿಗಳಿಂದ 30 ಶ್ಲಾಘನೀಯ ಪತ್ರ, 25 ಪ್ರಶಂಸೆ ಪತ್ರ , 50ಕ್ಕೂ ಹೆಚ್ಚು ನಗದು ಬಹುಮಾನ ಪಡೆದುಕೊಂಡಿದ್ದು, ಇದೀಗ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.