ಕಾಸರಗೋಡು, ಆ 29 (MSP): ಕನ್ನಡ ಮಾಧ್ಯಮ ಶಾಲೆಗೆ ಮಲಯಾಳ ಶಿಕ್ಷಕನ ನೇಮಕ ವಿರುದ್ಧ ಕನ್ನಡಿಗರ ಹೋರಾಟಕ್ಕೆ ತಾತ್ಕಾಲಿಕ ಗೆಲುವು ಲಭಿಸಿದೆ. ಕಳೆದ ಒಂದು ತಿಂಗಳಿನಿಂದ ಮಂಗಲ್ಪಾಡಿ ಸರಕಾರಿ ಶಾಲಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದು , ಹೋರಾಟಕ್ಕೆ ಪೋಷಕರು , ಕನ್ನಡ ಹೋರಾಟ ಸಮಿತಿ , ಕನ್ನಡ ಭಾಷಾಭಿಮಾನಿಗಳು, ಹಾಗೂ ವಿವಿಧ ಪಕ್ಷ , ಸಂಘಟನೆಗಳ ಬೆಂಬಲ ಲಭಿಸುವ ಮೂಲಕ ಕನ್ನಡಿಗರ ಹಕ್ಕಿಗಾಗಿರುವ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಮಂಗಲ್ಪಾಡಿ ಸರಕಾರಿ ಶಾಲೆಯ ಕನ್ನಡ ಮಾಧ್ಯಮಕ್ಕೆ ಗಣಿತ ಪಠ್ಯಕ್ಕೆ ಮಲಯಾಳ ಶಿಕ್ಷಕನ ನೇಮಕ ದ ವಿರುದ್ಧ ಕಳೆದ ಒಂದು ತಿಂಗಳ ಹಿಂದೆ ಪ್ರತಿಭಟನೆಗೆ ನಾಂದಿ ಹಾಡಿತ್ತು. ಜುಲೈ 29 ರಿಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸುವ ಮೂಲಕ ಒಂದೆಡೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರೆ ಮತ್ತೊಂದೆಡೆ ಶಾಲಾ ರಕ್ಷಕ - ಶಿಕ್ಷಕ ಸಂಘ, ಕನ್ನಡ ಹೋರಾಟ ಸಮಿತಿ ಬೆಂಬಲ ನೀಡಿತ್ತು .
ಕನ್ನಡಿಗರ ಪ್ರತಿಭಟನೆಗೆ ಮಣಿದ ಶಿಕ್ಷಕ ಸುದೀರ್ಘ 120 ದಿನ ರಜೆಯಲ್ಲಿ ತೆರಳಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ತಾತ್ಕಾಲಿಕ ವಾಗಿ ಹಿಂತೆಗೆದುಕೊಳ್ಳಲಾಗಿದೆ.ಓಣಂ ರಜೆ ಲಭಿಸಲು ದಿನಗಳಿರುವಾಗ ಶಿಕ್ಷಕ ಕನ್ನಡಿಗರ ಒತ್ತಡಕ್ಕೆ ಮಣಿದು ರಜೆ ಪಡೆದು ತೆರಳಿದ್ದರು. ಆ ಬಳಿಕ ಓಣಂ ರಜೆ ಕಳೆದು ಇಂದು ಮತ್ತೆ ಶಾಲೆಗೆ ಬರುವ ಸಾಧ್ಯತೆ ಇದ್ದುದರಿಂದ ಪೋಷಕರು ದಿಗ್ಬಂಧನ ಹಾಕಲು ತೀರ್ಮಾನಿಸಿದ್ದರು. ಈ ನಡುವೆ ಶಾಲೆಗೆ ತಲಪಿದ ಶಿಕ್ಷಕನನ್ನು ಪೋಷಕರು ತರಾಟೆಗೆ ತೆಗೆದುಕೊಂಡರು. ಕನ್ನಡದಲ್ಲಿ ಪಾಠ ಮಾಡುತ್ತಿದ್ದಾರೆ ಮಾತ್ರ ಕನ್ನಡ ತರಗತಿಗೆ ತೆರಳಬೇಕು . ಮಲಯಾಳದಲ್ಲಿ ಪಾಠ ಮಾಡುವುದಾದರೆ ಒಪ್ಪಲು ಸಾಧ್ಯ ಇಲ್ಲ . ಯಾವುದೇ ಕಾರಣಕ್ಕೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದರು. ಮತ್ತೊಂದೆಡೆ ಕನ್ನಡ ಹೋರಾಟ ಸಮಿತಿ ಕೂಡಾ ಬೆಂಬಲವಾಗಿ ನಿಂತಿತ್ತು. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರ್ಷಾದ್ ವರ್ಕಾಡಿ , ಫರೀದಾ ಝಕೀರ್ , ಕೆ . ಭಾಸ್ಕರ ಕಾಸರಗೋಡು ಶಾಲೆಗೆ ತಲಪಿ ಶಾಶ್ವತ ಪರಿಹಾರ ಕಲ್ಪಿಸಬೇಕು , ಶಿಕ್ಷಕನನ್ನು ಯಾವುದೇ ಕಾರಣಕ್ಕೆ ತರಗತಿಗೆ ತೆರಳಲು ಬಿಡಲಾರೆವು ಎಂದು ಪಟ್ಟು ಹಿಡಿದರು. ಲಿಖಿತವಾಗಿ ಶಿಕ್ಷಕ ಬರೆದುಕೊಟ್ಟಲ್ಲಿ ಮಾತ್ರ ಮುಷ್ಕರ ಹಿಂತೆಗೆದುಕೊಳ್ಳುವುದಾಗಿ ಪಟ್ಟು ಹಿಡಿದರು .
ಕೊನೆಗೆ ವಿದ್ಯಾರ್ಥಿಗಳ ಪೋಷಕರ ಹಾಗೂ ಹೋರಾಟಗಾರರ ಪ್ರತಿಭಟನೆಗೆ ಮಣಿದ ಶಿಕ್ಷಕ 120 ದಿನ ರಜೆ ಯಲ್ಲಿ ತೆರಳಲು ಸಮ್ಮತಿಸಿದರು. ಇದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಯಿತು.ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಮಲಯಾಳ ಭಾಷೆ ಹೇರಿಕೆಗೆ ವ್ಯವಸ್ಥಿತವಾಗಿ ಹುನ್ನಾರ ನಡೆಯುತ್ತಿದ್ದು , ಇದಕ್ಕೆ ಪೂರಕವೆಂಬಂತೆ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕ ಮಾಡುವ ಮೂಲಕ ಕನ್ನಡಿಗರಿಗೆ ಪ್ರಹಾರ ನೀಡಲು ಮುಂದಾಗಿದೆ.
ಆದರೆ ಮಂಗಲ್ಪಾಡಿ ಶಾಲೆಯಲ್ಲಿ ಮಲಯಾಳ ಶಿಕ್ಷಕರ ನೇಮಕದ ವಿರುದ್ಧ ನಡೆಸಿದ ಹೋರಾಟಕ್ಕೆ ಆರಂಭದಲ್ಲಿ ಗೆಲುವು ಲಭಿಸಿದೆ ಎನ್ನಬಹುದು. ಜುಲೈ 29ರಂದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೋರಾಟಕ್ಕಿಳಿದಿದ್ದರು . ಆಗಸ್ಟ್ ಮೂರರಂದು ಕಾಸರಗೋಡಿನಲ್ಲಿರುವ ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು . ಆದರೆ ಬೇಡಿಕೆ ಇತ್ಯರ್ಥವಾಗದ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಶಾಲಾ ಪರಿಸರದಲ್ಲಿ ವಿದ್ಯಾರ್ಥಿಗಳು , ಪೋಷಕರು ಹಾಗೂ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ತಲಪಿದ್ದ ಶಿಕ್ಷಣ ಇಲಾಖಾ ಉಪನಿರ್ದೇಶಕ ರ ನ್ನು ವಿದ್ಯಾರ್ಥಿಗಳು ದಿಗ್ಬಂಧನದಲ್ಲಿರಿಸಿದ್ದರು .ಕೊನೆಗೆ ಸಮಸ್ಯೆ ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದ್ದರು ಆದರೆ ಶಿಕ್ಷಕ ಕೆಲವೇ ದಿನ ರಜೆಯಲ್ಲಿ ತೆರಳಿ ಇಂದು ಮತ್ತೆ ಶಾಲೆಗೆ ಹಾಜರಾಗಿದ್ದು , ಕನ್ನಡಿಗರ ಮೇಲೆ ಸವಾರಿ ಮಾಡುವಂತಹ ಯತ್ನ ಕೂಡಾ ನಡೆದಿದೆ.
ಆದರೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು , ಪೋಷಕರು , ಕನ್ನಡ ಭಾಷಾ ಅಭಿಮಾನಿಗಳು ,ಕನ್ನಡ ಹೋರಾಟಗಾರರ ಪ್ರತಿಭಟನೆಗೆ ಮಣಿದ ಶಿಕ್ಷಕ ಸುದೀರ್ಘ ರಜೆಯಲ್ಲಿ ತೆರಳುವ ಮೂಲಕ ಕನ್ನಡಿಗರ ಹೋರಾಟಕ್ಕೆ ತಾತ್ಕಾಲಿಕ ಜಯ ಲಭಿಸುವಂತಾಗಿದೆ. ಆದರೆ ಕನ್ನಡಿಗರ ಮೇಲಿನ ದಬ್ಬಾಳಿಕೆ ವಿರುದ್ಧ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಿದ್ದು , ಕನ್ನಡಿಗರ ಹಕ್ಕುಗಳ ಸಂರಕ್ಷಣೆಗೆ ಯಾವುದೇ ರೀತಿಯ ಹೋರಾಟಕ್ಕೂ ಕನ್ನಡಿಗರು ಮುಂದಾಗಿದ್ದಾರೆ .ಹೋರಾಟಕ್ಕೆ ತಾತ್ಕಾಲಿಕ ಗೆಲುವು ಲಭಿಸಿದ ಹಿನ್ನಲೆಯಲ್ಲಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಶಾಲಾ ಪರಿಸರದಲ್ಲಿ ಸಮಾವೇಶ ಆಯೋಜಿಸಿತ್ತು. ಸಮಾವೇಶದಲ್ಲಿ ಪ್ರತಿಭಟನೆ ಬಗ್ಗೆ ಅವಲೋಕನ ನಡೆಸಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಹೋರಾಟಕ್ಕೆ ರೂಪು ನೀಡಲಾಯಿತು.