ಸುಳ್ಯ, ಆ 29 (MSP): ಜೋಡುಪಾಲ ಮತ್ತು ಮೊಣ್ಣಂಗೇರಿ ಪ್ರದೇಶಗಳಲ್ಲಿ ನಡೆದ ಜಲ ಪ್ರಳಯ ಮತ್ತು ಭೂಕುಸಿತದಿಂದಾಗಿ ಸ್ಥಳಾಂತರಿಸಲಾದ ಕುಟುಂಬಗಳ ಪೈಕಿ ದುರಂತ ನಡೆದು 10 ದಿನಗಳ ಬಳಿಕವೂ ಭೂಕುಸಿತ ಆಗುವ ಸಾಧ್ಯತೆಗೆ ಹೆದರಿ ಮನೆಗೆ ಮರಳಲಾಗದೇ 278 ಮಂದಿ ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ. ಈ ಮಧ್ಯೆ ಸುಳ್ಯದ ಅರಂತೋಡು ತೆಕ್ಕಿಲ್ ಪರಿಹಾರ ಕೇಂದ್ರವನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಲಾಗಿದೆ.
ದುರಂತದಲ್ಲಿ ಹಲವಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಅಲ್ಲದೇ ಭೂಕುಸಿತ ಆಗುವ ಸಾಧ್ಯತೆಗೆ ಹೆದರಿ ಜನರು ತಮ್ಮ ಮನೆಗಳಿಗೆ ಹೋಗದೇ ನಿರಾಶ್ರಿತರ ಕೇಂದ್ರಗಳಲ್ಲೆ ದಿನ ಕಳೆಯುತ್ತಿದ್ದಾರೆ. ಸುಳ್ಯದ ಅರಂತೋಡು ತೆಕ್ಕಿಲ್ ಸಮುದಾಯಭವನದಲ್ಲಿ ಮದುವೆ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದರಿಂದ ಇಲ್ಲಿನ ಪರಿಹಾರ ಕೇಂದ್ರಗಳಲ್ಲಿ ಇದ್ದ 20 ಕುಟುಂಬಗಳ ಸುಮಾರು ೬೫ ಮಂದಿಯನ್ನು ಸಂಪಾಜೆಯ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಸಂಪಾಜೆ ಮತ್ತು ಕಲ್ಲುಗುಂಡಿ ಪರಿಹಾರ ಕೇಂದ್ರಗಳಲ್ಲಿ 77 ಕುಟುಂಬಗಳ ಸುಮಾರು 278 ಮಂದಿ ಆಶ್ರಯ ಪಡೆದಿದ್ದಾರೆ. ಕಲ್ಲುಗುಂಡಿಯಲ್ಲಿ 33 ಕುಟುಂಬಗಳ 115 ಮಂದಿ, ಸಂಪಾಜೆಯಲ್ಲಿ 24 ಕುಟುಂಬಗಳ 98 ಮಂದಿ ಅಲ್ಲದೇ ಅರಂತೋಡು ಕೇಂದ್ರದಿಂದ ಸ್ಥಳಾಂತರ ಮಾಡಿದ ಸುಮಾರು 20ಕುಟುಂಬಗಳ 65 ಮಂದಿಯನ್ನು ಕೊಡಗು ಸಂಪಾಜೆಯ ಸರಕಾರಿ ಆಸ್ಪತ್ರೆ ಮತ್ತು ಸಮುದಾಯ ಭವನದ ಪರಿಹಾರ ಕೇಂದ್ರಗಳಲ್ಲಿ ಇದ್ದಾರೆ.
ಈಗಾಗಲೇ ಅರಂತೋಡು ಕೇಂದ್ರದಲ್ಲಿ 32 ಕುಟುಂಬಗಳು ಮಡಿಕೇರಿ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತಗೊಂಡಿದೆ. ಕಲ್ಲುಗುಂಡಿ ಕೇಂದ್ರದಿಂದ 42ಕುಟುಂಬ, ಸಂಪಾಜೆ ಕೇಂದ್ರದಿಂದ 101 ಕುಟುಂಬಗಳು ತಮ್ಮ ಮನೆಗಳಿಗೆ ಮತ್ತು ಬಂಧುಗಳ ಮನೆಗಳಿಗೆ ತೆರಳಿದ್ದಾರೆ. ನಿರಾಶ್ರಿತರ ಕೇಂದ್ರಗಳಲ್ಲಿದ್ದ ದೇವರಕೊಲ್ಲಿ, ಅರೆಕಲ್ಲು ಮತ್ತು ಸಂಪಾಜೆ ಭಾಗದವರು ಮನೆಗಳಿಗೆ ತೆರಳಿದ್ದಾರೆ. ದುರಂತ ನಡೆದ ಜೋಡುಪಾಲ, ಮದೆನಾಡು, ಮೊಣ್ಣಂಗೇರಿ ಭಾಗದ ಜನರು ಈಗಲೂ ಪರಿಹಾರ ಕೇಂದ್ರದಲ್ಲಿದ್ದಾರೆ. ಭೂಕುಸಿತ ಮತ್ತು ಪ್ರಕೃತಿ ವಿಕೋಪದಿಂದ ನೂರಾರು ಮನೆ ನಾಶವಾಗಿದೆ. ಹಲವು ಮನೆಗಳು ವಾಸಕ್ಕೆ ಸಾಧ್ಯವಿಲ್ಲದಷ್ಟು ಹಾನಿಯಾಗಿದೆ.
ಗೋಡೆ ಬಿರುಕು ಬಿಟ್ಟ ಮನೆಗಳಲ್ಲಿ ಅಪಾಯದ ಸ್ಥಿತಿ ಮನಗಂಡು ಕೆಲವರು ಮನೆ ಬಿಟ್ಟಿದ್ದಾರೆ.ಜೋಡುಪಾಲ ಮತ್ತು ಮೊಣ್ಣಂಗೇರಿಯ ಪ್ರಕೃತಿ ದುರಂತದಲ್ಲಿ ಮನೆ-ಮಠ, ಇಡೀ ಭೂಮಿ ಕಳೆದುಕೊಂಡು ನಿರಾಶ್ರಿತರು ಮೂರು ಕೇಂದ್ರಗಳು ಇದ್ದು, ಬಾಡಿಗೆ ಮನೆಗಳಿಗೆ ತೆರಳಿ, ಆಶ್ರಯ ಪಡೆಯುತ್ತಿದ್ದಾರೆ. ಈ ಎಲ್ಲ ನಿರಾಶ್ರಿತರ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಯ ಸ್ಥಿತಿ-ಗತಿಗಳ ಅಧ್ಯಯನಕ್ಕೆ ಅಧಿಕಾರಿಗಳ ತಂಡ ಸರ್ವೆಕಾರ್ಯ ನಡೆಸುತ್ತಿದೆ.