ಕಾಸರಗೋಡು,ಆ 28 (MSP): ಎರ್ನಾಕುಲಂನಲ್ಲಿ ಕೊಲೆ ಹಾಗೂ ಇತರ ಹಲವು ಪ್ರಕರಣಗಳಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿದ್ದ ಕಾಸರಗೋಡು ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೂಲತಃ ತಿರುವನಂತಪುರ ನಿವಾಸಿ, ಪ್ರಸ್ತುತ ಚೆರ್ಕಳದಲ್ಲಿ ವಾಸಿಸುತ್ತಿರುವ ರಾಜನ್ (58) ಎಂದು ಗುರುತಿಸಲಾಗಿದೆ. ಎರ್ನಾಕುಲಂ ನ ಅಂಗಮಾಲಿ ಹಾಗೂ ಕಾಸರಗೋಡು ವಿದ್ಯಾನಗರ ಠಾಣಾ ಪೊಲೀಸರ ನೆರವಿನೊಂದಿಗೆ ಚೆರ್ಕಳದಿಂದ ಬಂಧಿಸಲಾಗಿದೆ.
ಈತ ಕಳೆದ ಮಾರ್ಚ್ 10ರಂದು ರಾತ್ರಿ ಎರ್ನಾಕುಳಂ ಜಿಲ್ಲೆಯ ಅಂಗಮಾಲಿ ಪೇಟೆಯ ಜ್ಯುವೆಲ್ಲರಿ ಸಮೀಪದ ಹಳೆ ಕಟ್ಟಡದಲ್ಲಿ ಮಲಗಿದ್ದ ಚಾಲಕುಡಿ ಯ ಸತ್ಯನ್(45) ಎಂಬಾತನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದನು. ಸತ್ಯನ್ ಚಮ್ಮಾರ ವೃತ್ತಿ ಮಾಡಿ ಅಂಗಮಾಲಿಯಲ್ಲೇ ದುಡಿದು ಅಂಗಡಿಯೊಂದರ ಜಗಲಿಯಲ್ಲಿ ರಾತ್ರಿ ಮಲಗುತ್ತಿದ್ದ. ಆರೋಪಿ ಶಿವನ್ಕುಟ್ಟಿ ಅಂಗಮಾಲಿ ಪ್ರದೇಶಗಳಲ್ಲಿ ಗುಜರಿ ಸಾಮಗ್ರಿಗಳನ್ನು ವ್ಯಾಪಾರ ಮಾಡುತ್ತಿದ್ದ . ಇವರಿಬ್ಬರೂ ಒಂದೇ ಅಂಗಡಿಯ ಜಗಲಿಯಲ್ಲಿ ಮಲಗುತ್ತಿದ್ದರು. ಈ ಮಧ್ಯೆ ಅಂಗಡಿ ಜಗಲಿಯಲ್ಲಿ ಮಲಗುವ ವಿಷಯದಲ್ಲಿ ಹಿಂದೆ ವಾಗ್ವಾದ ಉಂಟಾಗಿ ಮಾರ್ಚ್ 10 ರಂದು ರಾತ್ರಿ ಕೃತ್ಯ ನಡೆಸಿ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ವಿದ್ಯಾನಗರ ಹಾಗೂ ಇತರ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.