ದೆಹಲಿ ಆ 28 (MSP): ಆಮೆಗತಿಯಲ್ಲಿ ಸಾಗುತ್ತಿರುವ ತಲಪಾಡಿ- ಕುಂದಾಪುರ ರಾಷ್ಟೀಯ ಹೆದ್ದಾರಿಯ 66 ರ ಪಂಪ್ ವೆಲ್ ಹಾಗೂ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯನ್ನು ಜನವರಿಯೊಳಗೆ ಪೂರ್ಣಗೊಳಿಸುವಂತೆ ನವಯುಗ ಕನ್ ಸ್ಟ್ರಕ್ಷನ್ ಸಂಸ್ಥೆಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದೇಶ ನೀಡಿದ್ದಾರೆ. ಇದಕ್ಕೆ ನವಯುಗ ಕಂಪನಿಯ ಆಡಳಿತ ನಿರ್ದೇಶಕ ಶ್ರೀಧರ್ ಸಮ್ಮತಿ ಸೂಚಿಸಿದ್ದು ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಚೇರಿಯಲ್ಲಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ರಾಷ್ಟೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ನವಯುಗ ಆಡಳಿತ ನಿರ್ದೇಶಕರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗದ ಜತೆ ಸೋಮವಾರ ಸಭೆ ನಡೆಸಿದ ಸಚಿವರು ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಪೂರ್ಣಗೊಳ್ಳಬೇಕು ಇದು ನಿಮ್ಮ ಜವಾಬ್ದಾರಿ, ಕಾಮಗಾರಿಗೆ ವೇಗ ನೀಡಿ ಜನವರಿಯ ಒಳಗೆ ಪೂರ್ಣವಾಗಬೇಕು ಎಂದು ಹಾಜರಿದ್ದ ವ್ಯವಸ್ಥಾಪಕರಿಗೆ ಆದೇಶ ನೀಡಿದ್ದಾರೆ. ಇದಲ್ಲದೆ ಶಿರಾಡಿ ಘಾಟ್ ನಲ್ಲಿನ ಪೂರಕ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೀಘ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗಡ್ಕರಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ
ಪಂಪ್ ವೆಲ್ ಪ್ಲೈಓವರ್ ಕಾಮಗಾರಿ ವಿಳಂಬ ಹಿನ್ನಲೆಯಲ್ಲಿ ಪ್ರತಿಪಕ್ಷ ಮುಖಂಡರು ಕೇಂದ್ರ ಸರ್ಕಾರ ಮತ್ತು ಸಂಸದ ನಳಿನ್ ವಿರುದ್ದ ಸಾಕಷ್ಟು ಟೀಕೆಗಳನ್ನು ಮಾಡಿದ್ದರು . ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಆಗಸ್ಟ್ 2ರಂದು ನಳಿನ್ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದು ಈ ಹಿನ್ನಲೆಯಲ್ಲಿ ಸಚಿವರು ಸಭೆ ನಡೆಸಿ ಸೂಚನೆ ನೀಡಿದ್ದಾರೆ.
ಈ ಸಂದರ್ಭಎಸ್. ಅಂಗಾರ , ಶಾಸಕರಾದ ಹರೀಶ್ ಪೂಂಜಾ , ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು ಉಪಸ್ಥಿತರಿದ್ದರು.