ಉಪ್ಪಿನಂಗಡಿ,ಆ 28 (MSP) : ಸಾರ್ವಜನಿಕ ವಲಯದಲ್ಲಿ ಮಕ್ಕಳನ್ನು ಕಳ್ಳತನದ ವದಂತಿಯ ಅನುಮಾನದ ಮೇಲೆ ಯಾರ್ಯಾರೋ ಧರ್ಮದೇಟು ತಿಂದ ಪ್ರಸಂಗ ರಾಜ್ಯಾದ್ಯಾಂತ ಕೇಳಿಬರುತ್ತಿದೆ. ಈ ನಡುವೆ ಉಪ್ಪಿಂಗಡಿಯಲ್ಲಿಯೂ ಮಗು ಕಳ್ಳತನವಾದ ಸುದ್ದಿ ಹಬ್ಬಿ ಬಳಿಕ ಸ್ಥಳೀಯರು ಸುಸ್ತು ಬಿದ್ದ ಘಟನೆ ನಡೆದಿದೆ.
ಉಪ್ಪಿನಂಗಡಿಯ ಪೋಸ್ಟ್ ಆಫೀಸ್ ಮುಂದಿನ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಅಂಗಡಿಯೊಂದರಲ್ಲಿ ಆಗಸ್ಟ್ 27ರ ಸೋಮವಾರ ಮದ್ಯಾಹ್ನ ಖರೀದಿಗೆ ಎಂದು ಬಂದ ಮಹಿಳೆಯೊಬ್ಬರು, ನನ್ನ ಮಗು ಎಲ್ಲೂ ಕಾಣುಸುತ್ತಿಲ್ಲ ಎಂದು ಕಿರುಚಿಕೊಂಡಿದ್ದು ಸ್ಥಳೀಯರ ಹಾಗೂ ಪೊಲೀಸರ ಆತಂಕಕ್ಕೆ ಕಾರಣವಾಯಿತು.
’ನನ್ನ ಮಗು ಎಲ್ಲಿಯೂ ಕಾಣಿಸುತ್ತಿಲ್ಲ ’ ಎಂದು ಆತಂಕ ವ್ಯಕ್ತಪಡಿಸಿದಾಗ ಆ ಮಹಿಳೆಯ ಸಹಾಯಕ್ಕೆ ಸ್ಥಳೀಯರು ಧಾವಿಸಿದರು. ತಡ ಮಾಡದೇ ಸ್ಥಳೀಯರು, ವ್ಯಾಪಾರಸ್ಥರು, ಯುವಕರು ಮಗುವಿಗಾಗಿ ಸುತ್ತಮುತ್ತ ಎಲ್ಲೆಡೆ ಹುಡುಕಾಡಿದರು. ಈ ನಡುವೆ ಪೊಲೀಸರಿಗೂ ಮಗು ನಾಪತ್ತೆಯಾದ ಬಗ್ಗೆ ಸುದ್ದಿ ರವಾನಿಸಲಾಯಿತು.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯ ವ್ಯಾಪಾರಿಗಳಲ್ಲಿ ತಮ್ಮ ತಮ್ಮ ಸಿಸಿ ಟಿವಿ ಪೂಟೇಜ್ ಗಳನ್ನು ಪರಿಶೀಲಿಸಿಸುವಂತೆಯೇ ಸೂಚಿಸಿದರು. ಪೊಲೀಸರ ಸೂಚನೆಯಂತೆ ಮಗುವನ್ನು ಕಿಡ್ನಾಪ್ ಮಾಡುವ ದೃಶ್ಯವೇನಾದರೂ ಇದೆಯೇ ಎಂದು ವಾಣಿಜ್ಯ ಮಳಿಗೆಯ ಮಂದಿ ಪರಿಶೀಲಿಸಿದರು.
ಇತ್ತ ಎಲ್ಲರೂ ಗಾಬರಿಯಿಂದ ಮಗು ಹುಡುಕಾಡುತ್ತಿದ್ದರೆ, ಸಮೀಪದ ಫ್ಯಾನ್ಸಿ ಸ್ಟೋರ್ ನಿಂದ ಸುಮಾರು 18ರ ಅಸುಪಾಸಿನ ಯುವತಿಯೊಬ್ಬಳು ಬಂದು ಕಣ್ಣೀರಿಡುತ್ತಿದ್ದ ಮಹಿಳೆ ಬಳಿ ಬಂದು ನಿಂತಳು. ತಕ್ಷಣ ಯುವತಿಯನ್ನು ಕಂಡೊಂಡನೆ ಮಹಿಳೆ ಸಂತೋಷ ಹಾಗೂ ಅಕ್ರೋಶಭರಿತರಾಗಿ ನೀನೆಲ್ಲಿಗೆ ಹೋಗಿದ್ದೆ, ಇಷ್ಟು ಹೊತ್ತು ಎಲ್ಲಿದ್ದಿ ಎಂದು ಪ್ರಶ್ನಿಸತೊಡಗಿದಳು. ಆಕೆಯನ್ನು ಸಮಧಾನಿಸುತ್ತಿದ್ದ ಸ್ಥಳೀಯರು ಗೊಂದಲಕ್ಕೆ ಒಳಗಾಗಿ 'ಈ ಯುವತಿ ಯಾರು' ಎಂದು ಪ್ರಶ್ನಿಸಿದಾಗ 'ಕಣ್ಮರೆಯಾಗಿದ್ದ ನನ್ನ ಮಗು ಇವಳೇ' ಎಂದಾಗ ಬೆಚ್ಚಿ ಬೀಳುವ ಸರದಿ ಸ್ಥಳೀಯರದಾಗಿತ್ತು.
ತಾಯಿ ಅಂಗಡಿಯಲ್ಲಿ ಖರೀದಿ ಮಾಡುತ್ತಿದ್ದ ವೇಳೆ ಆಕೆಯ ಮಗಳು ಪಕ್ಕದಲ್ಲೆ ಇದ್ದ ಪ್ಯಾನ್ಸಿ ಅಂಗಡಿಗೆ ತೆರಳಿದ್ದಳು. ಅಲ್ಲಿದ್ದ ವಸ್ತುಗಳ ಬಗ್ಗೆ ವಿಚಾರಿಸುತ್ತಿದ್ದ ಯುವತಿ ಬುರ್ಖಾ ಧರಿಸಿದ್ದರಿಂದ ಹಾಗೂ ಅಂಗಡಿಯಲ್ಲಿ ತುಂಬಾ ಬುರ್ಖಾಧಾರಿ ಮಹಿಳೆಯರಿದ್ದ ಕಾರಣ ತನ್ನ ಪುತ್ರಿಯನ್ನು ಗುರುತಿಸಲು ಸಾಧ್ಯವಾಗದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿತ್ತು.