ಬೀದರ್, ಆ 28 (MSP) : ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಕಾಂಗ್ರೆಸ್ ಶಾಸಕರ ಹೇಳಿಕೆಗಳಿಂದ ಅಲ್ಲಲ್ಲಿ ಬಹಿರಂಗವಾಗುತ್ತಿದೆ. ಈ ಸರದಿ ಇದೀಗ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಳ್ಳುವ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಅವರದ್ದು. ಸಿಎಂ ಕುಮಾರಸ್ವಾಮಿ ಕೊಂಚ ಎಡವಿದ್ರೂ ಕುರ್ಚಿಯಿಂದ ಕೆಳಕ್ಕೆ ಇಳಿಸ್ತೀವಿ ಎನ್ನೋ ವಾರ್ನಿಂಗ್ ನ್ನು ಬೀದರ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀಡಿದ್ದಾರೆ.
ನಮ್ಮ ಕುಮಾರಸ್ವಾಮಿ ಕಡೆಯಿಂದ 37 ಶಾಸಕರು ಇದ್ದಾರೆ, ನಮ್ಮವು 80 ಇದೆ. ಅದ್ದರಿಂದ ಸಿಎಂ ಕುಮಾರಸ್ವಾಮಿ ನಮ್ಮ ಹೆಗಲ ಮೇಲೆ ಕುಂತಿದ್ದಾನೆ. ಆತನೇನಾದ್ರೂ ನಮ್ಮ ಕಿವಿಯೊಳಗೆ ಎಣ್ಣೆ ಬಿಡದಿದ್ರೆ ಸುಮ್ಕೆ 5 ವರ್ಷ ಸಿಎಂ ಆಗಿರ್ತಾನೆ. ಅಪ್ಪಿ ತಪ್ಪಿ ಎಲ್ಲಾದರೂ ನಮ್ಮ ಕಿವಿಯೊಳಗೆ ಎಣ್ಣೆ ಬಿಡಲು ಶುರು ಮಾಡಿದ್ರೆ ಸಿಎಂ ಕುರ್ಚಿಯಿಂದ ಆಗಲೇ ಇಳಿಸ್ತೇವೆ. ಅದರಲ್ಲಿ ಎರಡು ಮಾತಿಲ್ಲ ಎಂದು ತಮ್ಮ ಎಂದಿನ ಶೈಲಿಯಲ್ಲಿಯೇ ಸಿಎಂ ಕುಮಾರಸ್ವಾಮಿಯವರನ್ನು ಏಕವಚನದಲ್ಲೇ ಸಂಭೋದಿಸುತ್ತ ಶಾಸಕ ನಾರಾಯಣರಾವ್ ಎಚ್ಚರಿಕೆ ನೀಡಿದ್ದಾರೆ. ನಾವು ಹೀಗೆಲ್ಲ ಮಾತನಾಡಿದ್ರೆ, ನಮಗೆ ಪಾರ್ಟಿಯಲ್ಲಿ ಹೀಗೇಕೆ ಮಾತಾಡ್ತಿಯಾ ಅಂತಾರೆ. ಇನ್ನ ಹೇಗೆ ಮಾತನಾಡಬೇಕು? ಎಂದು ಪರೋಕ್ಷವಾಗಿ ತಮ್ಮ ಪಕ್ಷದ ನಾಯಕರ ವಿರುದ್ಧವೂ ನಾರಾಯಣರಾವ್ ಗುಡುಗಿದ್ದಾರೆ.
ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೆ ಏರುವುದು ನಿಶ್ಚಿತ. ಆದರೆ ಹಿಂದುಳಿದ ಬಡ ಜನ ಬೆಳೀತಾರ, ಸದೃಢ ಆಗ್ತಾರೆ ಎಂದೆಲ್ಲ ಸಂಚು ಮಾಡಿ ಸಿಎಂ ಸ್ಥಾನದಿಂದ ಸಿಗದಂತೆ ಪಿತೂರಿ ಮಾಡಿದ್ದಾರೆ, ಆದರೆ ಇದ್ಯಾವುದು ಶಾಶ್ವತ ಅಲ್ಲ. ಸೂರ್ಯಮೂಡುವುದು ಎಷ್ಟು ಸತ್ಯವೋ ಸಿದ್ದರಾಮಯ್ಯ ಸಿಎಂ ಆಗೋದೂ ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.