ಸುಳ್ಯ ಆ 28 (MSP): ಭಾರೀ ಮಳೆ, ಭೂ ಕುಸಿತ, ಪ್ರವಾಹದ ಬಳಿಕ ಕೊಡಗು ಹಾಗೂ ಜೋಡುಪಾಲ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ ಸ್ಥಳೀಯರಲ್ಲಿ ಆತಂಕ ಅಘಾತಗಳೂ ಕಡಿಮೆಯಾಗಿಲ್ಲ. ಇವೆಲ್ಲದರ ನಡುವೆ ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿಯಡಿ ನದಿ ನೀರು ಹರಿಯುವಿಕೆಯಂತಹ ಶಬ್ದದಿಂದ ಊರಿಗೆ ಊರೇ ಬೆಚ್ಚಿಬಿದ್ದಿದೆ.
ಸ್ಥಳೀಯವಾಗಿ ಅಲ್ಲಿ ನದಿ ತೊರೆಗಳಿಲ್ಲ, ಆದರೂ ನೀರು ಹರಿಯುವಂತಹ ಜುಳು ಜುಳು ಶಬ್ದ ಭೂಮಿಯ ಆಳದಿಂದ ಆ ಭಾಗದಲ್ಲಿ ಕೇಳಿಬರುತ್ತಿದ್ದು ಇದು ಹಲವಾರು ಅನುಮನಗಳಿಗೆ ಎಡೆಮಾಡಿದೆ. ಈ ಶಬ್ದ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುಂಡತ್ತಿಕಾನ ಊರಿನಲ್ಲಿ ವಾಸವಾಗಿರುವ ಕೇಶವ ನಾಯ್ಕ ಇವರ ಮನೆ ಸಮೀಪ ಈ ಸದ್ದು ತುಸು ಜೋರಾಗಿಯೇ ಕೇಳಿಬರುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಮಡಿಕೇರಿಯಲ್ಲಿ ಸಂಭವಿಸಿದ ಜಲ ಪ್ರವಾಹದ ಸಂದರ್ಭದಲ್ಲಿ ಹಲವು ಪ್ರದೇಶದಲ್ಲಿ ಧರೆ ಕುಸಿತವಾಗಿ ಏಕಾಏಕಿ ದೊಡ್ದ ಪ್ರಮಾಣದಲ್ಲಿ ನೀರು ನದಿಯಂತೆ ಹರಿದು ಬಂದು ಕೆಸರಿನ ಪ್ರವಾಹವನ್ನೇ ಸೃಷ್ಟಿಸಿತ್ತು. ಈ ಬೆಟ್ಟ ಗುಡ್ಡ ಸೀಳಿಕೊಂಡು ಬಂದ ನೀರು ಬಂದಿದ್ದಾದರೂ ಎಲ್ಲಿಂದ ಎಂಬ ಸಂಶಯ ಹಲವರನ್ನು ಕಾಡತೊಡಗಿತ್ತು.
ಬೆಟ್ಟ ಗುಡ್ದದ ತಳ ಭಾಗದಲ್ಲಿ ಸಂಗ್ರಹಗೊಂಡ ನೀರು ಭೂ ಗರ್ಭವನ್ನು ಸೀಳಿಕೊಂಡು ಬಂದು, ಸಣ್ಣ ತೊರೆಯಿದ್ದ ಜಾಗ ಕೆಲವೇ ನಿಮಿಷದ ಅಂತರದಲ್ಲಿ ದೊಡ್ಡ ನದಿಯ ರೂಪ ಪಡೆದು ಭಾರೀ ಅನಾಹುತವನ್ನೇ ಸೃಷ್ಟಿಸಿತ್ತು ಎನ್ನುವುದು ಕೆಲವರ ವಾದವಾಗಿತ್ತು. ಈ ಪ್ರವಾಹದಲ್ಲಿ ಬಂಡೆ ಕಲ್ಲುಗಳು, ಮರ ಗಿಡಗಳು, ಮನೆ, ಕೃಷಿ ಭೂಮಿ ಹೀಗೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು. ಇದಕ್ಕೆ ಜೋಡುಪಾಲ ಮದೆನಾಡು, ಗಾಳಿಬೀಡು ಮಣ್ಣಂಗೇರಿ, ಕಾಟಿಕೇರಿ ಮುಂತಾದ ಪ್ರದೇಶಗಳು ಸಾಕ್ಷಿಯಾಗಿತ್ತು.
ಕೊಡಗಿನಲ್ಲಿ ಕಾವೇರಿ ನದಿ ಗುಪ್ತಗಾಮಿನಿಯಂತೆ ಹರಿಯುವ ನಂಬಿಕೆಯಿದೆ. ಅಂತೆಯೇ ಗುಪ್ತಗಾಮಿನಿಯಂತೆ ಯಾವುದಾದರೂ ನದಿಯೊಂದು ಹರಿಯುತ್ತಿದೆಯೋ ಎಂಬ ಅನುಮಾನವನ್ನು ಹಲವರನ್ನು ಕಾಡತೊಡಗಿದೆ. ಈ ಗುಪ್ತಗಾಮಿನಿ ಹರಿಯುವ ನೀರಿನ ಶಬ್ದ ನಿರಂತರವಾಗಿ ಕೇಳಿ ಬರುತ್ತಿದ್ದು ಯಾವುದಾದರೂ ಅನಾಹುತ ಸೃಷ್ಟಿಸಬಹುದೆ ಅಥವಾ ಧರೆ ಕುಸಿತಕ್ಕೆ ಕಾರಣವಾಗಬಹುದೇ ಎಂಬ ಭಯ ಸ್ಥಳೀಯರನ್ನು ಕಾಡತೊಡಗಿದೆ. ಸ್ಥಳಕ್ಕೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.