ಬೆಳ್ತಂಗಡಿ, ಆ 28 (MSP) : ಭೂ ಕುಸಿತ ಹಾಗೂ ಭಾರಿ ಮಳೆಗೆ ಕಂಗೆಟ್ಟ ಘಾಟಿ ಪ್ರದೇಶದ ರಸ್ತೆಗಳೆಲ್ಲವೂ ಬಂದ್ ಆಗಿದ್ದು, ಪ್ರಯಾಣಿಕರೆಲ್ಲರೂ ಚಾರ್ಮಾಡಿ ಘಾಟಿಯನ್ನೇ ಅವಲಂಬಿಸುವಂತಾಗಿದೆ. ಶಿರಾಡಿ ಘಾಟ್, ಬಿಸಿಲೆ ಘಾಟ್ ನಲ್ಲಿ ವಾಹನ ಸಂಚಾರ ನಿಷೇದದ ಬಳಿಕ ಕಿರಿದಾದ ಚಾರ್ಮಾಡಿ ಘಾಟ್ ರಸ್ತೆ ವಾಹನಗಳ ದಟ್ಟಣೆಯಿಂದ ಕೂಡಿದೆ. ಈ ನಡುವೆ ಚಾರ್ಮಾಡಿ ಘಾಟಿಯಲ್ಲಿ ಆ.27 ರ ಸೋಮವಾರ ಮದ್ಯರಾತ್ರಿ ಸುಮಾರು 1 ಗಂಟೆಯ ವೇಳೆಗೆ ಲಾರಿಯೊಂದು ರಸ್ತೆಮದ್ಯದಲ್ಲಿ ಕೆಟ್ಟು ನಿಂತು ಟ್ರಾಫಿಕ್ ಜಾಮ್ ಉಂಟಾಗಿ ಸಾವಿರಾರು ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು. ಚಾರ್ಮಾಡಿ ಘಾಟ್ ಪ್ರಾರಂಭದಿಂದ ಸುಮಾರು 10 ಕಿ.ಮೀ ವರೆಗೆ ವಾಹನಗಳು ಹಿಂದಕ್ಕೂ ಮುಂದಕ್ಕೂ ಚಲಿಸದೆ ನಿಂತಲ್ಲೆ ನಿಲ್ಲುವ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. ಆನಾರೋಗ್ಯ ಪೀಡಿತರೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಂಬುಲೆನ್ಸ್ ಕೂಡಾ ಈ ಟ್ರಾಪಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಪರದಾಡಬೇಕಾಯಿತು. ಮಳೆಯ ಪರಿಣಾಮ ರಸ್ತೆಯಿಂದ ವಾಹನಗಳನ್ನು ಬದಿಗೆ ಇಳಿಸಲೂ ಸಾಧ್ಯವಾಗದ ಪರಿಸ್ಥಿತಿಯಿದೆ.
ಸೋಮವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಬಸ್ಗಳ ಸಾವಿರಾರು ಪ್ರಯಾಣಿಕರು ಮಂಗಳವಾರ ಬೆಳಗ್ಗೆ 8ಗಂಟೆಯ ವರೆಗೆ ನಿಂತಲ್ಲೆ ನಿಂತು ಪರದಾಡಬೇಕಾಯಿತು. ಇನ್ನೊಂದೆಡೆ ಸೋಮವಾರ ರಾತ್ರಿ ಮಳೆಯ ಆರ್ಭಟ ಕೂಡಾ ಜೋರಾಗಿದ್ದು, ಪ್ರಯಾಣಿಕರಿಗೆಲ್ಲರಿಗೂ ಗುಡ್ಡ ಕುಸಿತದ ಭಯ ಕಾಡತೊಡಗಿತ್ತು.
ಇನ್ನು ಮಂಗಳವಾರ ಬೆಳಗ್ಗೆ ಧರ್ಮಸ್ಥಳ ಉಡುಪಿ ಮಂಗಳೂರು ತಲುಪಬೇಕಾಗಿದ್ದ ಬಸ್ ಗಳ ಇನ್ನೂ ಕೂಡಾ ರೀಚ್ ಆಗಿಲ್ಲ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ, ಹರ ಸಾಹಸಪಟ್ಟು ಲಾರಿ ತೆರವುಗೊಳಿಸಿದ್ದು, ಸಂಚಾರ ಮತ್ತೆ ಪುನಾರಂಭಗೊಂಡಿದೆ. ಆದರೆ ಘಾಟ್ ನಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳಿರುವ ಕಾರಣ ಸಂಚಾರ ಮಂದಗತಿಯಲ್ಲಿ ಸಾಗುತ್ತಿದೆ. ವಿಪರ್ಯಾಸವೆಂದರೆ ಘನ ವಾಹನಗಳಿಗೆ ನಿಷೇಧ ಹೇರಿದ ನಡುವೆಯೂ ಬೃಹತ್ ಲಾರಿಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುತ್ತಿವೆ.