ಮಂಗಳೂರು, ಆ 27(SM): ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಈ ತಿಂಗಳಾಂತ್ಯಕ್ಕೆ ನಡೆಯಲಿದ್ದು, ಈ ಹಿನ್ನೆಲೆ ಚುನಾವಣೆಯ ದಿನದಂದು ಹಾಗೂ ಮತ ಎಣಿಕೆ ದಿನದಂದು ಮದ್ಯ ಮುಕ್ತ ನಗರವನ್ನಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ವಾತಾವರಣದಲ್ಲಿ ಮತದಾನ ನಡೆಸುವ ಉದ್ದೇಶದಿಂದಾಗಿ ಪುತ್ತೂರು ನಗರಸಭೆ, ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಆಗಸ್ಟ್ 29ರ ಸಾಯಂಕಾಲ 6 ಗಂಟೆಯಿಂದ ಆಗಸ್ಟ್ 31ರ ಸಂಜೆ 6 ಗಂಟೆವರೆಗೆ ಮದ್ಯ ಮುಕ್ತ ದಿನಗಳೆಂದು ಘೋಷಿಸಲಾಗಿದೆ. ಮತ ಎಣಿಕೆಯ ಸಲುವಾಗಿ ಸೆಪ್ಟಂಬರ್ 3ರಂದು ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 8 ಗಂಟೆವರೆಗೆ ಮತ ಎಣಿಕೆ ನಡೆಯುವ ಪ್ರದೇಶವಾದ ಭಾರತ್ ಪ್ರೌಢಶಾಲೆ ಉಳ್ಳಾಲ, ಪುತ್ತೂರು ಮತ್ತು ಬಂಟ್ವಾಳ ತಾಲೂಕು ಕಚೇರಿಗಳ 3 ಕಿ.ಮೀ. ವ್ಯಾಪ್ತಿ ಪ್ರದೇಶಗಳನ್ನು ಮದ್ಯ ಮುಕ್ತ ದಿನಗಳೆಂದು ಘೋಷಿಸಲಾಗಿದೆ.
ಈ ದಿನಗಳಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮತ್ತು ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ. ಈ ದಿನಗಳಲ್ಲಿ ಪುತ್ತೂರು ನಗರಸಭೆ, ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಸೂಚಿತ ಅವಧಿಯಲ್ಲಿ ಯಾವುದೇ ಹೊಟೇಲುಗಳಲ್ಲಿ, ಸ್ಟಾರ್ ಹೊಟೇಲ್ಗಳಲ್ಲಿ ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ಕೂಡ ನಿಷೇಧಿಸಿ ಆದೇಶಿಸಲಾಗಿದೆ.