ಉಳ್ಳಾಲ, ಆ 27(SM): ತನ್ನನ್ನು ಸಹೋದರಿ ಮತ್ತು ಆಕೆಯ ಪತಿ ಚೆನ್ನಾಗಿ ಉಪಚರಿಸುತ್ತಿಲ್ಲ ಎಂದು ಆಕ್ರೋಶಗೊಂಡು ಹಿರಿಯ ನಾಗರಿಕನೋರ್ವ ದಂಪತಿಗೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ತೊಕ್ಕೊಟ್ಟು ಕಾಪಿಕಾಡಿನ ಜೋಸೆಫ್ ಡಿಸೋಜ(64) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿದ ಆರೋಪಿ ಡೆನ್ನಿಸ್(78) ವಿರುದ್ಧ ಉಳ್ಳಾಲ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದೆ.
ಮೃತ ಜೋಸೆಫ್
ಆರೋಪಿ ಡೆನ್ನಿಸ್
ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸ್ ಕಮಿಷನರ್
ಮೃತರ ಪತ್ನಿ ಹಾಗೂ ಆರೋಪಿಯ ಸಹೋದರಿ ಜಾನೆಟ್ ಡಿಸೋಜಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಆಕೆ ಚೇತರಿಸಿಕೊಳ್ಳುತ್ತಿರುವುದಾಗಿ ಮೂಲಗಳು ತಿಳಿಸಿದೆ. ಆ.೮ ರಂದು ತೊಕ್ಕೊಟ್ಟು ಕಾಪಿಕಾಡಿನ ಮನೆಯಲ್ಲಿ ದಂಪತಿ ಮಲಗಿದ್ದ ಸಂದರ್ಭ ಅದೇ ಮನೆಯಲ್ಲಿ ವಾಸಿಸುತ್ತಿದ್ದ ಜಾನೆಟ್ ಅವರ ಹಿರಿಯ ಸಹೋದರ ಡೆನ್ನಿಸ್, ತನ್ನನ್ನು ಸಹೋದರಿ ಹಾಗೂ ಬಾವಾ ಚೆನ್ನಾಗಿ ಉಪಚರಿಸುತ್ತಿಲ್ಲ ಎಂದು ಆರೋಪಿಸಿ ಕಬ್ಬಿಣದ ರಾಡಿನಲ್ಲಿ ದಂಪತಿಯ ತಲೆಗೆ ಹಲ್ಲೆ ನಡೆಸಿದ್ದಾನೆ. ಇವರ ಕಿರುಚಾಟದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಜಾನೆಟ್ ಅವರ ಕಿರಿಯ ಸಹೋದರ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಪಿ ಡೆನ್ನಿಸ್ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ತಾನು ನಡೆಸಿರುವ ಕೃತ್ಯವನ್ನು ಒಪ್ಪಿಕೊಂಡಿದ್ದ. ಪೊಲೀಸರು ಡೆನ್ನಿಸ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸದ್ಯ ಪ್ರಕರಣದಲ್ಲಿ ಓರ್ವ ಮೃತಪಟ್ಟಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.