ಮಂಗಳೂರು, ಆ 27(SM): ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠ ಮತ್ತು ಸರ್ವವ್ಯಾಪಿಯಾದುದು. ತನ್ನ ಗರ್ಭದಲ್ಲಿರುವ ಎಲ್ಲಾ ವಿಷಯಗಳನ್ನು ಅರಿತುಕೊಂಡು ಇತರರಿಗೆ ಮಾದರಿ ಆಗುವಂತೆ ಕಾರ್ಯರೂಪದಲ್ಲಿ ತೋರಿಸಿಕೊಟ್ಟಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರಕ್ ಕೃಷ್ಣ ಪ್ರಸಾದ್ ಹೇಳಿದ್ದಾರೆ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಆಯೋಜಿಸಲಾದ ಭ್ರಾತೃತ್ವದ ರಕ್ಷಾ ಬಂಧನ-ಸಾಮರಸ್ಯದ ಸಹಭೋಜನ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ, ಇತರ ರಾಷ್ಟ್ರದ ಸಂಸ್ಕೃತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಸ್ವೀಕರಿಸಿಕೊಂಡು ಅವುಗಳಿಗೆ ಒಂದು ನೆಲೆಗಟ್ಟನ್ನು ರೂಪಿಸಿಕೊಟ್ಟಿದೆ ಎಂದರು.
ಜನ್ಮಕೊಟ್ಟ ತಾಯಿಯಿಂದ ಪ್ರತಿ ಜೀವ ಸಂಕುಲ, ಗಾಳಿ-ನೀರಿನಲ್ಲಿ ದೈವತ್ವವನ್ನು ಕಾಣುವುದೇ ನಮ್ಮ ದೇಶದ ಸಂಸ್ಕೃತಿ. ಎಲ್ಲರಲ್ಲೂ , ಎಲ್ಲದರಲ್ಲೂ ದೇವರನ್ನು ಕಾಣುವುದೇ ಭಾರತೀಯರು. ಸಾಮರಸ್ಯವನ್ನು ರಾಷ್ಟ್ರೀಯತೆಯೊಂದಿಗೆ ಸೇರಿಸಿಕೊಂಡು ಆಚರಿಸುತ್ತಿರುವ ಉತ್ಸವ ಶ್ಲಾಘನೀಯವಾದುದು ಎಂದರು. ಸೈಂಟ್ ಆಗ್ನೆಸ್ ಸ್ಪೆಷಲ್ ಸ್ಕೂಲ್ನ ಸ್ಥಾಪಕಿ ಭಗಿನಿ ಮರಿಯಾ ಜ್ಯೋತಿ ಅವರು ಕೃಷ್ಣ ಪ್ರಸಾದ್ ಅವರಿಗೆ ರಾಕಿ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಜೈ ಚರ್ಚ್ನ ಪ್ರಧಾನ ಧರ್ಮಗುರು ವಂದನೀಯ ವಿಲ್ಸನ್ ವೈಟಸ್ ಡಿ ಸೋಜಾ ಅವರಿಗೆ ಪ್ರಸನ್ನ ರವಿ ರಾಕಿ ಕಟ್ಟಿದರು. ಭಗಿನಿಯರಾದ ಮರಿಯಾ, ನಿತ್ಯ, ರಮ್ಯಾ, ಕಾರ್ಮೆಲ್ ಕಾನ್ವೆಟಿನ ಡಿವಿನಾ, ಐರಿನ್ ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೋ ಸ್ವಾಗತಿಸಿದರು. ನ್ಯಾಯವಾದಿ ನೋಟರಿ ಲ್ಯಾನ್ಸಿ ಪಿಂಟೋ ನಿರೂಪಿಸಿದರು. ಬಳಿಕ ಪಂಕ್ತಿ ಭೋಜನ ನಡೆಯಿತು.