ವಿಟ್ಲ, ಆ 27 (MSP) : ಪೆರುವಾಯಿ ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ದಫನ ಭೂಮಿಗೆ ರೆಕಾರ್ಡ್ ಒದಗಿಸಲು ಪೆರುವಾಯಿ ಗ್ರಾ.ಪಂ ಅನುಮತಿ ನೀಡದೇ ಇರುವುದನ್ನು ವಿರೋಧಿಸಿ ಹಾಗೂ ತಕ್ಷಣವೇ ಈ ಜಾಗಕ್ಕೆ ಎನ್ಓಸಿ ನೀಡುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಪೆರುವಾಯಿ ಗ್ರಾಮ ಪಂಚಾಯಿತಿ ಮುಂಭಾದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅವರು ಪೆರುವಾಯಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಈ ದಫನ ಭೂಮಿಯಿಂದಾಗಿ ಹಲವರಿಗೆ ಸಹಕಾರಿಯಾಗಿದೆ. ಇದಕ್ಕೆ ದಾಖಲೆ ಒದಗಿಸುವ ನಿಟ್ಟಿನಲ್ಲಿ ಅನುಮತಿಗಾಗಿ ಹಲವಾರು ಬಾರಿ ಗ್ರಾಮ ಪಂಚಾಯತ್ಗೆ ಮನವಿ ಮಾಡಿದ್ದೇವೆ. ಆದರೆ ಗ್ರಾ.ಪಂ ಮಾತ್ರ ಇದಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಹೇಳಿದರು.
ದಫನ ಭೂಮಿಗೆ ದಾಖಲೆ ಒದಗಿಸುವಂತೆ ನೀಡಿದ ಅರ್ಜಿಗೆ ಇಲ್ಲಿಯ ಅಭಿವೃದ್ಧಿ ಅಧಿಕಾರಿ ಯಾವುದೇ ಸ್ಪಂದನೆ ನೀಡದೇ ಅದನ್ನು ಬುಟ್ಟಿಗೆ ಎಸೆದಿದ್ದಾರೆ. ಈ ಬಗ್ಗೆ ಶಾಸಕರಿಗೆ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲಿಂದ ಸೂಚನೆ ಬಂದರೂ ಕೂಡ ಇಲ್ಲಿಯ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಭೂ ಮಾಲೀಕರ ಜತೆ ಸೇರಿಕೊಂಡು ಇಲ್ಲಿಯ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ. ಇಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಮನವಿ ಸಲ್ಲಿಸಲಾಗಿದ್ದರೂ ಕೂಡಾ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು. ಎನ್ಓಸಿ ನೀಡದೇ ನಾವು ಈ ಸ್ಥಳದಿಂದ ಹೋಗುವುದಿಲ್ಲ. ತಕ್ಷಣವೇ ಮೇಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.
ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸಲಾದ ಜಾಗ:
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ ಸೋಜ ಹಾಗೂ ಅಭಿವೃದ್ಧಿ ಅಧಿಕಾರಿ ಆಗಮಿಸಿ ಮಾತುಕತೆ ನಡೆಸಿ ಪೆರುವಾಯಿ ಗ್ರಾಮದ ಸೂರ್ಯಗಿರಿ ಎಂಬಲ್ಲಿ ಸ್ಮಶಾನಕ್ಕೆ ಎರಡು ಎಕರೆ ಜಾಗ ಕಾಯ್ದಿರಿಸಲಾಗಿದೆ. ಇಲ್ಲಿಯ ರಸ್ತೆ ಹಾಗೂ ಭೂಮಿಯನ್ನು ಸಮತಟ್ಟು ಮಾಡಲಾಗಿದೆ. ಆದರೆ ನೀವು ಕೇಳುತ್ತಿರುವ ನವಗ್ರಾಮದ ಅಶ್ವಥ ಬಳಿಯಲ್ಲಿರುವ ಜಾಗದ ಸಮೀಪ ಸೊಸೈಟಿ, ಆಸ್ಪತ್ರೆ, ಸಾರ್ವಜನಿಕ ಸ್ಥಳ ಇದೆ. ಇಲ್ಲಿ ಅಂಬೇಡ್ಕರ್ ಭವನ, ಕ್ರೀಡಾಂಗಣ ನಿರ್ಮಿಸಲು ಕಾಯ್ದಿರಿಸಲಾಗಿದೆ. ಇಲ್ಲಿಯ ಭೂಮಿ ಗ್ರಾಮ ಪಂಚಾಯಿತಿಗೆ ಕಂದಾಯ ಇಲಾಖೆಯಿಂದ ಹಸ್ತಾಂತರವಾಗಿಲ್ಲ. ಇದರಿಂದ ಎನ್ಓಸಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದರಿಂದ ಅಸಮಾಧಾನಗೊಂಡ ಪ್ರತಿಭಟನೆಕಾರರು ಘೋಷಣೆ ಕೂಗಿದರು. ವಿಟ್ಲ ಎಸೈ ಯಲ್ಲಪ್ಪ ಎಸ್ ಅವರು ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅಭಿವೃದ್ಧಿ ಅಧಿಕಾರಿಯವರು ನೀವು ಕೇಳುವ ಜಾಗ ಗ್ರಾಮ ಪಂಚಾಯಿತಿ ಅಧೀನದಲ್ಲಿ ಇಲ್ಲ. ಕಂದಾಯ ಇಲಾಖೆ ತಮ್ಮ ವಶಕ್ಕೆ ನೀಡಿದ ಬಳಿಕ ಎನ್ಓಸಿ ನೀಡಲಾಗುವುದು. ಈ ಬಗ್ಗೆ ಬೇಡಿಕೆ ಸಲ್ಲಿಸಿ. ಸಾಮಾನ್ಯ ಸಭೆಯಲ್ಲಿ ಅರ್ಜಿ ಮಂಡಿಸಿ ತಹಶೀಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭ ದಲಿತ್ ಸೇವಾ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷೆ ಪ್ರೇಮ ದಡ್ಡಲ್ತಡ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೀರ್ತಿ ಕುಮಾರಿ, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ತಾಲ್ಲೂಕು ಅಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಗೌರವ ಸಲಹೆಗಾರ ಮೋಹನದಾಸ ವಿಟ್ಲ, ಜಿಲ್ಲಾ ಸಹ ಸಂಚಾಲಕ ಸಂಕಪ್ಪ ನೆಲ್ಲಿಗುಡ್ಡೆ, ತಾಲ್ಲೂಕು ಉಪಾಧ್ಯಕ್ಷೆ ಪ್ರೇಮ ಬೆದ್ರಕಾಡು, ಜಿಲ್ಲಾ ಜತೆ ಕಾರ್ಯದರ್ಶಿ ಲಲಿತಾ ಸಾಲೆತ್ತೂರು, ನಾರಾಯಣ ಪೆರುವಾಯಿ, ಕೃಷ್ಣ ನಾಯ್ಕ ಪೆರುವಾಯಿ, ಸುರೇಶ್ ಆಲಂಗಾರು, ಕುಶಾಲಪ್ಪ ಮೂಡಂಬೈಲು ಮೊದಲಾದವರು ಭಾಗವಹಿಸಿದ್ದರು.