ಉಡುಪಿ, ಆ 27 : ಮಲ್ಪೆ ಕಡಲ ಕಿನಾರೆ ಸಮೀಪದ ರುದ್ರ ಭೂಮಿಯಲ್ಲಿ ನಡೆದ ತನ್ನ ತಾಯಿ ವಿಲಾಸಿನಿ ಶೆಟ್ತಿಗಾರ್ ಅವರ ಅಂತ್ಯ ಸಂಸ್ಕಾರದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜ ಆಗಸ್ಟ್ 27 ರ ಸೋಮವಾರ ಪಾಲ್ಗೊಂಡರು. ಉಡುಪಿಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಟಿ ಬನ್ನಂಜೆ ರಾಜನಿಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದು ಈ ಹಿನ್ನಲೆಯಲ್ಲಿ ರಾಜನನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಭಾನುವಾರವ ಉಡುಪಿ ನಗರದ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.
ಸೋಮವಾರ ಸುಮಾರು 11 ಗಂಟೆಗೆ ನಡೆದ ವಿಲಾಸಿನಿ ಶೆಟ್ತಿಗಾರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೆಂದು ಬನ್ನಂಜೆ ರಾಜನನ್ನು ಮಲ್ಪೆ ಕಡಲ ಕಿನಾರೆ ಸಮೀಪದ ರುದ್ರ ಭೂಮಿಗೆ ಕರೆತರಲಾಯಿತು. ಶವ ಸಂಸ್ಕಾರದಲ್ಲಿ ಭಾಗವಹಿಸಲು ಪಂಚೆ ಹಾಗೂ ಶಲ್ಯ ತೊಟ್ಟ ಬನ್ನಂಜೆ ರಾಜಾ ನಿರ್ಲಿಪ್ತರಾಗಿ ತಾಯಿಯ ಶವಕ್ಕೆ ಹೆಗಲುಕೊಟ್ಟು ಅಂತ್ಯ ಸಂಸ್ಕಾರ ವಿಧಿವಿಧಾನ ನೆರವೇರಿಸಿ ಮೃತದೇಹಕ್ಕೆ ಅಗ್ನಿಸ್ಪರ್ಶಿಸಿದರು. ಈ ಸಂದರ್ಭ ಬನ್ನಂಜೆ ರಾಜನ ಕುಟುಂಬಸ್ಥರು, ಪತ್ನಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭ ಡಿವೈಎಸ್ಪಿ ಕುಮಾರಸ್ವಾಮಿ, ಮಣಿಪಾಲ್ ಸರ್ಕಲ್ ಇನ್ಸ್ ಪೆಕ್ಟರ್ ಸುದರ್ಶನ್, ಬ್ರಹ್ಮಾವರದ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ನಾಯಕ್, ಮಲ್ಪೆ ಎಸ್ಐ ಮಧು ನೇತೃತ್ವದ ತಂಡ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಿದರು.