ಮಡಿಕೇರಿ, ಆ 27 (MSP): ಮಡಿಕೇರಿಯ ಪರಿಹಾರ ಕೇಂದ್ರದಲ್ಲಿಯೇ ಕಂಕಣ ಭಾಗ್ಯವೊಂದು ಕೂಡಿಬಂದಿದೆ. ಮಹಾಮಳೆ, ಪ್ರವಾಹ, ಪ್ರಕೃತಿವಿಕೋಪದಂತಹ ರಣಭೀಕರತೆಗೆ ನಲುಗಿದ್ದ ಮಕ್ಕಂದೂರು ನಿವಾಸಿ ಮಂಜುಳಾ ಅವರ ವಿವಾಹ ಈ ಹಿಂದೆ ನಿಶ್ಚಯಿಸಿದ್ದಂತೆ ಆಗಸ್ಟ್ 26ರ ಭಾನುವಾರ ನೆರವೇರಿತು.ಈ ಅಪರೂಪದ ವಿವಾಹಕ್ಕೆ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರೆಲ್ಲರೂ ವಧುವಿನ ಬಂಧುಗಳಾಗಿ ಭಾಗವಹಿಸಿ ದಂಪತಿಗಳನ್ನು ಆಶೀರ್ವದಿಸಿದರು.ಮದುವೆ ಕಾರ್ಯಕ್ರಮದ ಅಂಗವಾಗಿ ನಿರಾಶ್ರಿತರು ವಾಸವಾಗಿರುವ ಓಂಕಾರ ಸದನದ ಮುಂಭಾಗದಲ್ಲಿ ಶನಿವಾರ ಚಪ್ಪರ ಹಾಕುವ ಕಾರ್ಯಕ್ರಮ ಮತ್ತು ಮೆಹಂದಿ ಸಂಪ್ರದಾಯ, ಆರತಕ್ಷತೆ ಕಾರ್ಯಕ್ರಮವೂ ನೆರವೇರಿತು.
ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ 26ರ ಭಾನುವಾರ ಮಕ್ಕಂದೂರು ನಿವಾಸಿ ಮಂಜುಳಾ ಆರ್ ಹಾಗೂ ಕೇರಳ ಕಣ್ಣುರಿನ ರಜೀಶ್ ಸತಿಪತಿಗಳಾದರು. ಚಿಕ್ಕ ವಯಸ್ಸಿನಲ್ಲಿಯೇ ಮಂಜುಳಾ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಮತ್ತು ಅಣ್ಣ ಕೂಲಿ ಮಾಡಿ ಆಕೆಯನ್ನು ಬೆಳೆಸಿದ್ದರು. ಇಬ್ಬರೂ ಹೊಟ್ಟೆಬಟ್ಟೆ ಕಟ್ಟಿ ಮದುವೆಗೆಂದು ಒಂದಿಷ್ಟು ದುಡ್ಡನ್ನು ಕೂಡಿಟ್ಟರು. ಆದರೆ ಎಲ್ಲವೂ ಅಂದುಕೊಂಡಂತೆ ಆಗಿದ್ದಲ್ಲಿ ಮಕ್ಕಂದೂರಿನಲ್ಲಿ ಕಲ್ಯಾಣ ಮಂಟಪದಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆಯಬೇಕಿತ್ತು. ಮನೆ ಮಂದಿಯೆಲ್ಲಾ ತಮ್ಮ ಬಂಧು-ಮಿತ್ರರಿಗೆ ಆಹ್ವಾನಪತ್ರಿಕೆಯನ್ನೂ ಹಂಚಿದ್ದರು. ವಧುವಿಗೆ ಬೇಕಾದ ಆಭರಣ,ವಸ್ತ್ರ, ಖರ್ಚಿಗೆ ಹಣವನ್ನೂ ಮನೆಯಲ್ಲಿಟ್ಟಿದ್ದರು. ಆದರೆ, ಆ.12ರ ಮಹಾಮಳೆ ಹಾಗೂ ಭೂಕುಸಿತಕ್ಕೆ ಎಲ್ಲವೂ ಕ್ಷಣ ಮಾತ್ರದಲ್ಲಿ ನೀರುಪಾಲಾಗಿತ್ತು. ಪ್ರಾಣಾಪಾಯದಿಂದ ಪಾರಾದ ಮಂಜುಳಾ ಮನೆಯವರು ಮದುವೆಯ ಆಸೆಯನ್ನೇ ಕೈ ಬಿಟ್ಟಿದ್ದರು.
ಆದರೆ, ಜನರು, ಸಂಘಸಂಸ್ಥೆಗಳು ಸಹಾಯ ಹಸ್ತ ಚಾಚಿದ್ದರಿಂದ ನಿಗದಿತ ಮುಹೂರ್ತದಲ್ಲಿಯೇ ಮದುವೆ ನೆರವೇರಿದೆ. ಈ ವಿವಾಹ ಮಂಜುಳಾ ಪೋಷಕರಿಗೆ ನೋವಿನಲ್ಲೂ ನಲಿವನ್ನು ಕಾಣುವಂತೆ ಮಾಡಿದೆ.