ದೆಹಲಿ, ಆ 27(MSP): ವಿವಾಹ ವಿಚ್ಚೇದನದ ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದ್ದರೂ ದಂಪತಿಗಳ ನಡುವೆ ವಿಚ್ಚೇದನಕ್ಕೆ ಒಮ್ಮತದ ಅಭಿಪ್ರಾಯವಿದ್ದರೆ ಮರು ಮದುವೆಯಾಗಲು ಅಡ್ಡಿಯಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮೇಲ್ಮನವಿ ವಿಚಾರಣೆ ತೀರ್ಪು ಹೊರಬಿದ್ದರೆ ಮಾತ್ರ ಇನ್ನೊಂದು ಮದುವೆಯಾಗಬಹುದು ಎಂದು ಹೇಳುತ್ತದೆಯಾದರೂ, ಆದರ ಸೆಕ್ಷನ್ 15ನ್ನು ವಿಶ್ಲೇಷಿಸಿರುವ ನ್ಯಾಯಾಮೂರ್ತಿಗಳಾದ ಎಸ್.ಎ ಬಾಬ್ಡೆ ಮತ್ತು ಎಲ್. ನಾಗೇಶ್ವರ್ ರಾವ್ , ವಿಚ್ಚೇದನ ಪ್ರಕ್ರಿಯೆ ನಡೆದು ಮೇಲ್ಮನವಿ ಅರ್ಜಿ ಸುದೀರ್ಘವಾದರೆ 2ನೇ ಮದುವೆ ಆಗುವುದು ತಪ್ಪಿಲ್ಲ ಎಂದು ತಿಳಿಸಿದೆ. ಹೀಗಾಗಿ ಈ ಹಿಂದೆ ನೀಡಿದ್ದ ಕೌಟುಂಬಿಕ ಹಾಗೂ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದೆ. ವಿಚ್ಚೇದನ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಎರಡನೇ ವಿವಾಹವಾಗಿ, ಕಳೆದ ಏಳು ವರ್ಷಗಳಿಂದ ನ್ಯಾಯಾಲಯದ ಸುಳಿಗೆ ಸಿಲುಕಿದ್ದ ವ್ಯಕ್ತಿಗೆ ಕೋರ್ಟ್ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದೆ.
ಪ್ರಕರಣದ ವಿವರ
2009 ರಲ್ಲಿ ದೆಹಲಿಯಲ್ಲಿ ಪತಿ ಅನುರಾಗ್ ವಿರುದ್ದ ಪತ್ನಿ ವಿಚ್ಚೇದನ ಕೋರಿ ಕೌಟುಂಬಿಕ ಕೋರ್ಟ್ ಗೆ ಮೊರೆ ಹೋಗಿದ್ದರು. ರಚನಾ ಜತೆ ಬಾಳಲು ಸಿದ್ದವಿರುವುದಾಗಿ ಅನುರಾಗ್ ಇನ್ನೊಂದು ಅರ್ಜಿ ಸಲ್ಲಿಸಿದ್ದರು. ಆದರೆ ರಚನಾರ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್ ಅನುರಾಗ್ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಬಾಗಿಲು ತಟ್ಟಿದ್ದರು. ಈ ನಡುವೆ ದಂಪತಿಗಳಿಬ್ಬರು ಅರ್ಜಿ ವಿಚಾರಣೆ ಬಾಕಿ ಇರುವಂತೆಯೇ ಸಂಧಾನ ಕೇಂದ್ರದಲ್ಲಿ ವಿಚ್ಚೇದನಕ್ಕೆ ಒಮ್ಮತದ ಅಭಿಪ್ರಾಯಕ್ಕೆ ಬಂದರು. ಬಳಿಕ ರಚನಾ ಜತೆ ಬಾಳಲು ಸಿದ್ದ ಎಂದು ಹೈಕೋರ್ಟ್ ಸಲ್ಲಿಸಿರುವಾಗ ಅರ್ಜಿಯನ್ನು ವಾಪಾಸ್ ಪಡೆಯುದಾಗಿ ಹೇಳಿದ್ದರು. ಇದಕ್ಕೆ ರಚನಾ ಕೂಡಾ ಸಮ್ಮತಿ ನೀಡಿದ್ದರು. ಈ ಮಾಹಿತಿಯಂತೆ ಹೈಕೋರ್ಟ್ 2011ರಲ್ಲಿ ಅಂತಿಮ ತೀರ್ಪು ನೀಡಿತು. ಆದರೆ ತೀರ್ಪಿಗೆ ಒಂದು ವಾರದ ಮೊದಲು ಅನುರಾಗ್ ಮರುಮದುವೆಯಾಗಿದ್ದರು. ಆದರೆ ರಚನಾ ಮರು ಮದುವೆಯನ್ನು ಪ್ರಶ್ನಿಸಿ ಕೌಟುಂಬಿಕ ನ್ಯಾಯಲಯಕ್ಕೆ ಮೊರೆ ಹೋಗಿ ಗೆದ್ದಿದ್ದರು.