ಬೆಳ್ತಂಗಡಿ, ಆ 26(SM): ಒಂದು ಸುಂದರ ಮನೆ ನಿರ್ಮಿಸಿ ಅದರಲ್ಲಿ ಜೀವನ ಸಾಗಿಸಬೇಕೆನ್ನುವ ಆಸೆ ಪ್ರತಿಯೊಬ್ಬರಲ್ಲಿದೆ. ಈ ಆಸೆ ಬಿಹಾರ ಮೂಲದ ಬೋಲಾ ಮೆಹ್ತಾ ಕುಟುಂಬಕ್ಕೂ ಇತ್ತು. ಆದರೆ ಬಡತನ ಅವರ ಆಸೆಗೆ ಮುಳುವಾಗಿತ್ತು. ಪರಿಣಾಮ ಶೌಚಾಲಯವೇ ಮನೆಯಾಗಿತ್ತು. ಶೌಚಾಲಯದಲ್ಲೇ ಜೀವನ ನಿರ್ವಹಿಸುತ್ತಿದ್ದ ಕುಟುಂಬಕ್ಕೀಗ ಕೊನೆಗೂ ಮುಕ್ತಿ ಸಿಕ್ಕಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸೂಚನೆ ಮೇರೆಗೆ ಈ ಕುಟುಂಬವನ್ನು ಸ್ಥಳಾಂತರಿಸಲಾಗಿದೆ.
ಕಳೆದ ನಾಲ್ಕೂವರೆ ವರ್ಷಗಳಿಂದ ಬಿಹಾರ ರಾಜ್ಯದ ಮಧುವನ್ ಗ್ರಾಮದ ಬೋಲಾ ಮೆಹ್ತಾ ಕುಟುಂಬ ಗಬ್ಬು ನಾತ, ಸೊಳ್ಳೆಗಳ ಕಾಟದ ಮಧ್ಯೆ ಜೀವನದ ಬಂಡಿಯನ್ನು ಸಾಗಿಸಿದೆ. ಪತ್ನಿ ರಾಧದೇವಿ, 7ರ ಪೋರಿ ನೇಹಾ ಸೇರಿದಂತೆ ಚಿಕ್ಕದಾದ ಚೊಕ್ಕ ಕುಟುಂಬಕ್ಕೆ ಶೌಚಾಲಯವೇ ಆಶ್ರಯ ತಾಣವಾಗಿತ್ತು. ಸಾವಿರಾರು ಮಂದಿ ಮಲ-ಮೂತ್ರ ವಿಸರ್ಜನೆಗೆ ಬಳಸುವ ಶೌಚಾಲಯದಲ್ಲಿ ಈ ಕುಟುಂಬ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕೂವರೆ ವರ್ಷಗಳನ್ನೇ ಕಳೆದಿದೆ. ಊಟ, ಆಟ, ಪಾಠ, ನಿದ್ದೆ ಹೀಗೆ ಎಲ್ಲಾ ಕಾರ್ಯಗಳಿಗೂ ಆ ಕುಟುಂಬಕ್ಕೆ ಇದ್ದದ್ದು ಅದೊಂದೇ ಶೌಚಾಲಯ. ವಿಶಾಲ, ಸುಂದರ ನಿವೇಶನಗಳಲ್ಲಿ ಹಾಯಾಗಿ ಕಾಲ ಕಳೆಯುವ ಒಂದು ವರ್ಗದ ಜನತೆಗೆ ಈ ಬಡ ಕುಟುಂಬದ ವೇದನೆ ಅರಿಯಲೇ ಇಲ್ಲ.
ಶೌಚಾಲಯದಲ್ಲಿ ಅಮಾನವೀಯ ಸ್ಥಿತಿಯಲ್ಲಿ ಬದುಕುತ್ತಿರುವ ಬಗ್ಗೆ ಕಳೆದ ೨ ವರ್ಷಗಳಿಂದ ಸ್ಥಳೀಯ ಪಟ್ಟಣ ಪಂಚಾಯತ್ ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ನೊಂದ ಕುಟುಂಬದ ಅಳಲು. ಆ ಕುಟುಂಬಕ್ಕೆ ಮೂರು ಮಕ್ಕಳಿದ್ದು ,ಇಬ್ಬರು ಊರಿನಲ್ಲಿದ್ದಾರೆ. ಹೆಣ್ಣು ಮಗುವೊಂದು ಅವರ ಜೊತೆಗಿದ್ದು ಪ್ರಸ್ತುತ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಳೆ. ಅನಾರೋಗ್ಯ ಕುಟುಂಬದ ಪ್ರತಿನಿತ್ಯದ ಗೋಲಾಗಿದ್ದು, ಇತ್ತೀಚಿಗೆ ಈ ಕುಟುಂಬದ ಮಗಳು ಕಾಯಿಲೆಯೊಂದಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಳು. ಕಷ್ಟ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಈ ಕುಟುಂಬಕ್ಕೆ ನೆರವಾಗುವವರು ಯಾರೂ ಇಲ್ಲ ಎಂಬುದು ಕುಟುಂಬದ ನೋವಿನ ಮಾತುಗಳು.
ಇನ್ನು ಇಲ್ಲಿನ ವಿಚಾರವನ್ನು ತಿಳಿದ ಹಾಲಿ ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ವಸಂತ ಬಂಗೇರ ಸ್ಥಳಕ್ಕೆ ಭೇಟಿಯನ್ನು ನೀಡಿದ್ದರು. ಪಟ್ಟಣ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಅವರನ್ನು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ನರಕಯಾತನೆಯ ನಡುವೆ ದಿನ ದೂಡುತ್ತಿದ್ದ ಕುಟುಂಬವೊಂದಕ್ಕೆ ಇದೀಗ ಮುಕ್ತಿ ಸಿಕ್ಕಿದಂತಾಗಿದೆ.