ಮೈಸೂರು, ಆ 25(SS): ಪ್ರವಾಹ ಪೀಡಿತ ಕೊಡಗಿಗೆ ಪರಿಹಾರ ನಿಧಿ ಕೊಡಿಸಲು ಕೇಂದ್ರದ ಮೇಲೆ ಒತ್ತಡ ಹಾಕುವಲ್ಲಿ ಪ್ರತಾಪಸಿಂಹ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಸದ ಪ್ರತಾಪಸಿಂಹ ಕೇವಲ ಭಾಷಣ ಮಾಡಲು ಲಾಯಕ್ಕು. ಅವರಿಗೆ ಭಾಷಣ ಮಾಡಲು ಗೊತ್ತಿಲ್ಲ. ಹಾಗಾಗಿ ಕೊಡಗಿಗೆ ಪರಿಹಾರ ಸಿಕ್ಕಿಲ್ಲ. ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡಿದೆ. ಕೇಂದ್ರ ಸರಕಾರ ಶೀಘ್ರ ಕೊಡಗಿಗೆ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದ ಪ್ರತಿನಿಧಿಯಾಗಿ ಕೊಡಗಿಗೆ ಬಂದಿದ್ದರು. ಬರುವ ಮುನ್ನ ಪ್ರಧಾನಿ ಜತೆ ಪರಿಹಾರ ನೀಡುವ ಸಂಬಂಧ ಚರ್ಚಿಸಿ ಬರಬೇಕಿತ್ತು. ಕೊಡಗಿಗೆ ಅವರು ಪರಿಹಾರ ಘೋಷಿಸದೆ ಹೋದದ್ದು ಸರಿಯಲ್ಲ ಎಂದು ಹೇಳಿದ್ದಾರೆ.
ನೇರ ಪೀಡಿತ ಕೊಡಗು ಜಿಲ್ಲೆಗೆ ಸಾರ್ವಜನಿಕರಿಂದ ಭರಪೂರ ನೆರವು ಬಂದಿದೆ. ಸಂಘ ಸಂಸ್ಥೆಗಳ ಸ್ಪಂದನೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ಸಿಎಂ ಆಗಲು ನನಗೆ ಆಸೆ ಇಲ್ಲ. ಅದು ಜನರ ಆಸೆ ಎಂದು ಮತ್ತೆ ಸ್ಪಷ್ಟನೆ ನೀಡಿದ್ದಾರೆ.