ಮಂಗಳೂರು, ಆ 25(SS): ವಾಹನಗಳಿಗೆ ಶಿಸ್ತು ಕ್ರಮ ಜಾರಿಗೊಳಿಸಲು ಮುಂದಾಗಿರುವ ಮಂಗಳೂರಿನ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಂಕ್ಷನ್ಗಳಲ್ಲಿರುವ ಹೊಟೇಲ್, ಅಂಗಡಿ ಮುಂಗಟ್ಟುಗಳ ಎದುರು ಪಾರ್ಕಿಂಗ್ ಮಾಡುವ ವಾಹನ ಮಾಲಕರ ಮೇಲೂ ದಂಡ ಪ್ರಯೋಗಕ್ಕಿಳಿದಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಮಾತನಾಡಿದ ಅವರು, ನಗರದಲ್ಲಿ ಹೊಟೇಲ್, ಅಂಗಡಿ ಮುಂಗಟ್ಟುಗಳ ಎದುರು ಪಾರ್ಕಿಂಗ್ ಮಾಡುವ ವಾಹನ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಮಾತ್ರವಲ್ಲ, ವಾಹನ ಮಾಲಕರ ಜೊತೆಗೆ ಹೊಟೇಲ್, ಅಂಗಡಿಯ ಮಾಲಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದ ಫಳ್ನೀರ್ನಲ್ಲಿ ಹೊಟೇಲೊಂದರ ಬಳಿ ರಸ್ತೆಯಲ್ಲೇ ವಾಹನ ಪಾರ್ಕಿಂಗ್ ಮಾಡುವುದರಿಂದ ಅಲ್ಲಿನ ಆಸ್ಪತ್ರೆಗೆ ತೆರಳುವ ಆಂಬ್ಯುಲೆನ್ಸ್ಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸುರತ್ಕಲ್ ಹಾಗೂ ಉರ್ವ ಮಾರುಕಟ್ಟೆ ಬಳಿಯಲ್ಲೂ ಇಂತಹ ಸಮಸ್ಯೆ ಇದೆ ಎಂದು ಸಾರ್ವಜನಿಕರೊಬ್ಬರು ಫೋನ್ ಇನ್ ಕಾರ್ಯಕ್ರಮದಲ್ಲಿ ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಸವಾರರಲ್ಲಿ ಶಿಸ್ತು ಬರುವವರೆಗೂ ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಕೆಲ ಆಟೋ ಚಾಲಕರು ಜನರಿಂದ ಹೆಚ್ಚು ಹೆಚ್ಚು ಹಣ ಪಡೆದುಕೊಳ್ಳುತ್ತಾರೆ ಎಂದು ಮಹಿಳೆಯರೊಬ್ಬರು ದೂರು ನೀಡಿದ್ದು, ಇದಕ್ಕೂ ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ಆಟೋ ಚಾಲಕರ ವಿರುದ್ಧವೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ನಿಗದಿತ ದರಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುವ ಆಟೋಗಳ ನೋಂದಣಿ ಸಂಖ್ಯೆ ದಾಖಲಿಸಿ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಹೇಳಿದ್ದಾರೆ.