ಮಂಗಳೂರು, ಆ 25(SM): ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚನೆ ಮಾಡಿದ ಆರೋಪಿಯನ್ನು ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಕುಲ್ ವಿಂದರ್ ಕುಮಾರ್ ಬಂಧಿತ ಆರೋಪಿ. ಈತನನ್ನು ಗೋವಾದ ಕಲ್ಲಂಗೋಟ್ ಪ್ರದೇಶದಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಕುಲ್ ವಿಂದರ್, ಪಾಂಡೇಶ್ವರ ನಿವಾಸಿ ಕಿರಣ್ ತಿಲಗೋಳ್ ಗೆ ಉದ್ಯೋಗ ನೀಡುವುದಾಗಿ ನಂಬಿಸಿ ಹಣ ಪಡೆದುಕೊಂಡು ವಂಚಿಸಿದ್ದ.
ಕಿರಣ್ ತಿಲಗೋಳ್ ಉದ್ಯೋಗದ ಹುಡುಕಾಟದಲ್ಲಿದ್ದ ಸಂದರ್ಭ 2017ರ ನವೆಂಬರ್ 30ರಂದು ಅವರ ಇಮೇಲ್ಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಸಂದೇಶ ಬಂದಿತ್ತು. ಈ ಬಗ್ಗೆ ಕಿರಣ್ ತಿಲಗೋಳ್ ಸಂಪರ್ಕಿಸಿದಾಗ ಕೆನಡಾದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ಸಿಕ್ಕಿತ್ತು. ಇದನ್ನು ನಂಬಿದ ಕಿರಣ್ ತಿಲಗೋಳ್ ಮತ್ತೆ 26 ಮಂದಿ ಉದ್ಯೋಗ ಆಕಾಂಕ್ಷಿಗಳಿದ್ದಾರೆ ಎಂದು ತಿಳಿಸಿದ್ದು, ಅವರಿಗೂ ಉದ್ಯೋಗ ನೀಡುವುದಾಗಿ ಒಪ್ಪಿಗೆ ನೀಡಿದ್ದರು. ಉದ್ಯೋಗದ ಭರವಸೆ ದೊರೆತ ಹಿನ್ನೆಲೆಯಲ್ಲಿ ಎಲ್ಲರ ಅರ್ಜಿ ಶುಲ್ಕ ಸುಮಾರು 5,96,150 ರೂಪಾಯಿಗಳನ್ನು ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿದ್ದರು. ಆದರೆ ಒಂದು ಒಳ್ಳೆ ಉದ್ಯೋಗ ಸಿಗುತ್ತದೆ ಎಂದು ನಂಬಿದ್ದ ಯುವಕರಿಗೆ ನಿರಾಸೆಯಾಗಿದೆ. ಹಣ ಪಾವತಿಸಿದ ಬಳಿಕ ಕಿರಣ್ ತಿಲಗೋಳ್ ಅವರ ಕರೆ, ಇಮೇಲ್ ಗಳಿಗೆ ಯಾವುದೇ ಸ್ಪಂಧನೆ ಸಿಕ್ಕಿಲ್ಲ. ಈ ವೇಳೆ ತಾವು ಮೋಸ ಹೋಗಿರುವುದು ಅರಿವಾಗಿದೆ. ಈ ಕುರಿತು ಸೈಬರ್ ಕ್ರೈಂ ಠಾಣೆಗೆ ಕಿರಣ್ ಹಾಗೂ ಸ್ನೇಹಿತರು ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಇನ್ನು ಈ ನಡುವೆ ಆರೋಪಿ ಗೋವಾದ ಕಲ್ಲಂಗೋಟ್ ಪರಿಸರದಲ್ಲಿರುವುದಾಗಿ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಆ.21ರಂದು ಸೈಬರ್ ಠಾಣಾ ಪೊಲೀಸರು ಗೋವಾಕ್ಕೆ ತೆರಳಿದ್ದು, ಅಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.