ಕಾರ್ಕಳ, ಆ 24(SM): ಕಾರ್ಕಳ ಪುರಸಭೆಯ ಮಾಜಿ ಸದಸ್ಯ ಮಹಮ್ಮದ್ ಶರೀಫ್ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಪುರಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಅಶ್ಪಕ್ ಅಹಮ್ಮದ್ ವಿರುದ್ಧ ಪಕ್ಷೇತರವಾಗಿ ಸ್ವರ್ಧಾಕಣಕ್ಕೆ ಇಳಿದು ಪಕ್ಷ ವಿರುದ್ಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಪುರಸಭೆ ಚುನಾವಣೆ ಈ ತಿಂಗಳಾಂತ್ಯಕ್ಕೆ ನಡೆಯಲಿದೆ. ಚುನಾವಣೆಗೆ ಪಕ್ಷಗಳು ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿಕೊಂಡಿವೆ. ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರ ಪರ ಪ್ರಚಾರ ಕಾರ್ಯಗಳನ್ನು ಪ್ರಮುಖ ಪಕ್ಷಗಳು ನಡೆಸಿವೆ. ಈ ನಡುವೆ ಕಾರ್ಕಳ ಪುರಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಮಹಮ್ಮದ್ ಶರೀಫ್ ಕೂಡ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಮಹಮ್ಮದ್ ಶರೀಫ್ ಬದಲು ಅಶ್ಪಕ್ ಅಹಮ್ಮದ್ ರಿಗೆ ಟಿಕೆಟ್ ನೀಡಿತ್ತು. ಈ ಹಿನ್ನೆಲೆ ಅಸಮಾಧಾನಗೊಂಡು ಶರೀಫ್, ಅಶ್ಪಕ್ ವಿರುದ್ಧ ಪಕ್ಷೇತರಾಗಿ ಕಣಕ್ಕಿಳಿದು, ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಹೈಕಮಾಂಡ್ ಅದೇಶದ ಮೇರೆಗೆ ಪಕ್ಷದ ಸದಸ್ಯತ್ವದಿಂದ ಮಹಮ್ಮದ್ ಶರೀಫ್ ರನ್ನು ಉಚ್ಛಾಟನೆಗೊಳಿಸಲಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.