ಮಂಗಳೂರು, ಮಾ 19 (DaijiworldNews/MS): ಏಳನೇ ತರಗತಿ ವಿದ್ಯಾರ್ಥಿಯ ಶ್ವಾಸಕೋಶ ಭಾಗದಲ್ಲಿ ಗುಂಡುಸೂಜಿ ಇದ್ದು ತಪಾಸಣೆ ವೇಳೆ ಆ ಬಳಿಕ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರ ಅಬ್ದುಲ್ ಮುಬಶ್ಶೀರ್ (12) ಗೆ ಕಳೆದ ಕಳೆದ ಕೆಲದಿನಗಳಿಂದ ಜ್ವರ ಮತ್ತು ಕೆಮ್ಮು ಆರಂಭವಾಗಿತ್ತು. ಪದೇ ಪದೇ ಕಾಡುತ್ತಿರುವ ಕೆಮ್ಮು, ಉಸಿರಾಟ ತೊಂದರೆ, ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಕಂಕನಾಡಿಯ ಮಕ್ಕಳ ವೈದ್ಯ ಡಾ.ರಾಮ್ಗೋಪಾಲ್ ಶಾಸ್ತ್ರಿ ಅವರನ್ನು ಸಂಪರ್ಕಿಸಿ, ತಪಾಸಣೆಯಲ್ಲಿ ಸೂಚಿಸಿದಂತೆ ಎಕ್ಸ್ರೇ ತೆಗೆ ದಾಗ ಶ್ವಾಸಕೋಶದಲ್ಲಿ ಗುಂಡುಪಿನ್ನು ಕಂಡು ಬಂದಿತ್ತು.
ಬಾಲಕನ ಬಲಬದಿಯ ಶ್ವಾಸಕೋಶದಲ್ಲಿ ನೋಟಿಸ್ ಬೋರ್ಡಿಗೆ ಬಳಸಲಾಗುವ ಗುಂಡು ಪಿನ್ನು ಪತ್ತೆಯಾಗಿದೆ. ಬಾಲಕನಿಗೆ ಶಸ್ತ್ರಚಿಕಿತ್ಸೆ ನೀಡಲೆಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು, ವೈದ್ಯಕೀಯ ಉಪಕರಣವೊಂದನ್ನು ಬಳಸಿ ಪೈಪ್ ಮಾದರಿಯ ವಸ್ತುವೊಂದರ ಸಹಾಯದಿಂದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಬಾಲಕ ಸದ್ಯ ಆರೋಗ್ಯದಿಂದಿದ್ದು, ಮುಬಶ್ಶೀರ್ ನಿಗೆ ಗುಂಡುಸೂಜಿ ಹೇಗೆ ಶ್ವಾಸಕೋಶ ಸೇರಿತೆಂದೇ ಗೊತ್ತಿಲ್ಲದಿರುವುದು ಮತ್ತೊಂದು ಅಚ್ಚರಿಯಾಗಿದೆ.